ಬೀದರ್ :ಮೂರು ದಿನಗಳ ಕಾಲ ನಡೆಯುವ ಬೀದರ್ ಉತ್ಸವ ಅಂಗವಾಗಿ ಮುಖ್ಯ ವೇದಿಕೆ ಬೀದರ್ ಕೋಟೆ ಮತ್ತು ಪೂಜ್ಯ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಸಿದ್ಧವಾಗಿದೆ. 2023ರ ಜನವರಿ 7, 8, 9 ರಂದು ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಿಲ್ಲೆಯ ಸ್ಥಳೀಯ ಸಾಂಸ್ಕೃತಿಕ ಕಲಾತಂಡಗಳ ಆಯ್ಕೆಗಾಗಿ ನೇರ ಸಂದರ್ಶನ ಆಯೋಜಿಸಲಾಗಿದೆ.
ಡಿಸೆಂಬರ್ 9 ರಂದು ಬೆಳಗ್ಗೆ 11 ಗಂಟೆಗೆ ಚಿಟಗುಪ್ಪಾ ತಾಲ್ಲೂಕಿನ ಆರ್ಯ ಸಮಾಜ ಮಂದಿರದಲ್ಲಿ, ಹುಮನಾಬಾದ ತಾಲೂಕಿನ ಸರ್ಕಾರಿ ಪದವಿಪೂರ್ವ ಕಾಲೇಜು, ಬಸವಕಲ್ಯಾಣ ತಾಲೂಕಿನ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ (ಬಿ.ಕೆ.ಡಿ.ಬಿ), ಕಮಲನಗರ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹುಲಸೂರು ತಾಲೂಕಿನ ಶ್ರೀ ಗುರು ಬಸವೇಶ್ವರ ಮಠ ಆವರಣದಲ್ಲಿ, ಭಾಲ್ಕಿ ತಾಲೂಕಿನ ಪುರಭವನ ಆವರಣದಲ್ಲಿ, ಔರಾದ್ ತಾಲ್ಲೂಕಿನ ಶ್ರೀ ಅಮರೇಶ್ವರ ದೇವಸ್ಥಾನ ಆವರಣದಲ್ಲಿ ತಹಶಿಲ್ದಾರರ ಅಧ್ಯಕ್ಷತೆಯಲ್ಲಿ ಸಾಂಸ್ಕೃತಿಕ ಸ್ಥಳೀಯ ಮೆರವಣಿಗೆ ಮತ್ತು ವೇದಿಕೆ ಕಲಾವಿದರಿಗೆ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಜಿಲ್ಲಾ ಮಟ್ಟದಲ್ಲಿ ಡಿಸೆಂಬರ್ 13 ರಂದು ಬೆಳಗ್ಗೆ 11 ಗಂಟೆಗೆ ಪೂಜ್ಯ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಸಂದರ್ಶನ ಹಮ್ಮಿಕೊಳ್ಳಲಾಗಿದೆ. ಕಲಾವಿದರು ವೇಷಭೂಷಣ, ವಾದ್ಯಪರಿಕರದೊಂದಿಗೆ ಸಂದರ್ಶನಕ್ಕೆ ಹಾಜರಾಗುವ ವೇದಿಕೆ ತಂಡದಲ್ಲಿ ಕನಿಷ್ಠ 6ಕ್ಕಿಂತ ಹೆಚ್ಚು ಸದಸ್ಯರು ಇರತಕ್ಕದ್ದು, ಮೆರವಣಿಗೆ ತಂಡದಲ್ಲಿ ಕನಿಷ್ಠ 10 ರಿಂದ 16 ಸದಸ್ಯರು ಇರಬೇಕು. ಈ ಸಂದರ್ಶನದಲ್ಲಿ ಜಾನಪದ ಗಾಯನ, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ವಚನಗಾಯನ, ಸಮೂಹ ನೃತ್ಯ, ಭರತನಾಟ್ಯ, ವಾದ್ಯಸೋಲೊ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಜಾನಪದ ನೃತ್ಯ, ಡೊಳ್ಳು, ತಮಟೆ, ಲಂಬಾಣಿ ನೃತ್ಯ, ವಚನ ನೃತ್ಯ, ಸ್ಥಳೀಯ ವೈಶಿಷ್ಟ ಪ್ರತಿಬಿಂಬಿಸುವ ಕಲಾಪ್ರಕಾರಗಳನ್ನು ಸಾದರಪಡಿಸಲು ಅವಕಾಶ ಇರುತ್ತದೆ.