ಬಸವಕಲ್ಯಾಣ :ಕ್ಷೇತ್ರದ ಶಾಸಕ ಬಿ ನಾರಾಯಣರಾವ್ ಅವರ ನಿಧನದಿಂದಾಗಿ ತೆರವಾಗಿರುವ ಬಸವಕಲ್ಯಾಣ ಕ್ಷೇತ್ರದ ಉಪಚುನಾವಣೆಗೆ ಪಕ್ಷದ ಕಾರ್ಯಕರ್ತರು ಮತ್ತು ಕುಟುಂಬದವರ ಅಭಿಪ್ರಾಯದ ಮೇಲೆ ಅಭ್ಯರ್ಥಿ ಆಯ್ಕೆ ನಡೆಯಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತಿಳಿಸಿದರು.
ದಿ. ಬಿ ನಾರಾಯಣರಾವ್ ಅವರ ಪುಣ್ಯಸ್ಮರಣೆ ನಿಮಿತ್ತ ಸಮಾಧಿ ಸ್ಥಳದಲ್ಲಿ ಆಯೋಜಿಸಿದ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಬಿ.ನಾರಾಯಣರಾವ್ ಅವರ ಕುಟುಂಬದವರ ಅಭಿಪ್ರಾಯದ ಮೇಲೆ ಅಭ್ಯರ್ಥಿ ಆಯ್ಕೆಗೆ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಈಶ್ವರ ಖಂಡ್ರೆ ಉಪ ಚುನಾವಣೆ ಬರುತ್ತೆ ಎಂದು ಯಾರೂ ನಿರೀಕ್ಷೆ ಸಹ ಮಾಡಿರಲಿಲ್ಲ. ಆದರೆ, ನಾರಾಯಣರಾವ್ ಅವರ ಆಕಸ್ಮಿಕ ನಿಧನದಿಂದಾಗಿ ಉಪಚುನಾವಣೆ ಎದುರಾಗಿದೆ. ಕುಟುಂಬದ ಸದಸ್ಯರು ಸೇರಿ ನಾವೆಲ್ಲರು ಇನ್ನೂ ದುಃಖದಲ್ಲೇ ಇದ್ದೇವೆ. ಚುನಾವಣೆಗೆ ಅಭ್ಯರ್ಥಿ ಆಯ್ಕೆ ಸಂಬಂಧ ಇನ್ನೂ ಯಾವುದೇ ಚರ್ಚೆ ನಡೆದಿಲ್ಲ.
ಮುಂಬರುವ ದಿನಗಳಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಕುಟುಂಬದವರ ಅಭಿಪ್ರಾಯ ಸಂಗ್ರಹಿಸಿ ಸೂಕ್ತ ಅಭ್ಯರ್ಥಿಯನ್ನು ಪಕ್ಷದ ವರಿಷ್ಠರು ಆಯ್ಕೆ ಮಾಡಲಿದ್ದಾರೆ ಎಂದು ಖಂಡ್ರೆ ತಿಳಿಸಿದರು. ಈ ಸಂದರ್ಭದಲ್ಲಿ ಬೀದರ್ ಶಾಸಕ ರಹೀಮ್ ಖಾನ್, ಪಕ್ಷದ ತಾಲೂಕು ಅಧ್ಯಕ್ಷ ನೀಲಕಂಠ ರಾಠೋಡ್, ಬಿ.ನಾರಾಯಣರಾವ್ ಅವರ ಪತ್ನಿ ಮಲ್ಲಮ್ಮ, ಪುತ್ರರಾದ ಗೌತಮ್ ಮತ್ತು ರಾಹುಲ್ ಸೇರಿದಂತೆ ಪ್ರಮುಖರು ಮತ್ತು ಅವರ ಅಭಿಮಾನಿಗಳು ಉಪಸ್ಥಿತರಿದ್ದರು.