ಬಸವಕಲ್ಯಾಣ(ಬೀದರ್):ಗ್ರಾಮ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಮತದಾನಕ್ಕಾಗಿ ತೆರಳುತಿದ್ದ ಸದಸ್ಯರ ಮೇಲೆ ಅಧ್ಯಕ್ಷ ಆಕಾಂಕ್ಷಿಯೊಬ್ಬರ ಕುಟುಂಬದವರು ಹಲ್ಲೆ ನಡೆಸಿ, 7 ಜನ ಸದಸ್ಯರನ್ನು ಅಪಹರಿಸಿಕೊಂಡು ಹೋದ ಪ್ರಸಂಗ ತಾಲೂಕಿನ ಚಂಡಕಾಪೂರ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.
ಚಂಡಕಾಪೂರ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸದಸ್ಯೆ ಪುತಳಾಬಾಯಿ ಕುಟುಂಬದವರು ಸದಸ್ಯರನ್ನು ಅಪಹರಿಸಿದ್ದು, ಮಹಿಳಾ ಸದಸ್ಯರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಸದಸ್ಯೆ ಮಹಾದೇವಿ ದಯಾನಂದ ಸ್ವಾಮಿ ಎನ್ನುವರು 6 ಜನರ ವಿರುದ್ಧ ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಧ್ಯಕ್ಷ ಸ್ಥಾನ ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಿದೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಪುತಳಾಬಾಯಿ ಕುಟುಂಬದವರು ಒಬ್ಬ ಸದಸ್ಯರಿಗೆ ತಲಾ 2 ಲಕ್ಷದ ಆಮಿಷವೊಡ್ಡಿದ್ದರಂತೆ. ಇದನ್ನು ನಿರಾಕರಿಸಿ 10 ಜನ ಸದಸ್ಯರು ಕಲಬುರಗಿ ತುಳಜಾಪುರ ಮತ್ತಿತ್ತರ ಕಡೆಗೆ ಯಾತ್ರೆ ಹೋಗಿದ್ದು, ಕಲಬುರಗಿಯಿಂದ ಶನಿವಾರ ಚಡಂಕಾಪೂರ ಗ್ರಾಮದ ಕಡೆ ವಾಪಸ್ ಬರುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ತಡೋಳಾ ಸಮೀಪ 20ರಿಂದ 25 ಜನ ವಾಹನಗಳಿಗೆ ಅಡ್ಡಗಟ್ಟಿ 7 ಜನ ಸದಸ್ಯರಿಗೆ ಒತ್ತಾಯದಿಂದ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.