ಬೀದರ್: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(ನೀಟ್) ನಲ್ಲಿ 720 ಕ್ಕೆ 710 ಅಂಕ ಪಡೆಯುವ ಮೂಲಕ ರಾಜ್ಯದ ಗಡಿ ಜಿಲ್ಲೆ ಬೀದರ್ನ ಶಾಹೀನ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿ ಕಾರ್ತಿಕ್ ರೆಡ್ಡಿ ದೇಶಕ್ಕೆ 9, ರಾಜ್ಯದ ಮೊದಲ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.
ನೀಟ್ನಲ್ಲಿ ದೇಶಕ್ಕೆ 9, 85ನೇ ರ‍್ಯಾಂಕ್ ಪಡೆದ ಬೀದರ್ ವಿದ್ಯಾರ್ಥಿಗಳು ಬೀದರ್ ನಗರದ ಗುಂಪಾ ಬಡಾವಣೆ ನಿವಾಸಿಯಾದ ಕಾರ್ತಿಕ್ ರೆಡ್ಡಿ 2020ರ ನೀಟ್ ಪರೀಕ್ಷಾ ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಅಲ್ಲದೆ ಶಾಹೀನ್ ಸಂಸ್ಥೆಯ ಮತ್ತೊಬ್ಬ ವಿದ್ಯಾರ್ಥಿ ಮಹಮ್ಮದ್ ಅರ್ಬಾಜ್ ಅಹ್ಮದ್ ಸಹ 720 ಕ್ಕೆ 700 ಅಂಕ ಪಡೆಯುವ ಮೂಲಕ ದೇಶಕ್ಕೆ 85 ನೇ ಸ್ಥಾನ ಪಡೆದಿದ್ದಾರೆ. ಈ ಎರಡು ಕುಟುಂಬಸ್ಥರು ಹಾಗೂ ಶಾಹೀನ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಸಿಹಿ ಹಂಚುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
ನೀಟ್ ಪರೀಕ್ಷೆಯಲ್ಲಿ ದೇಶಕ್ಕೆ ಈ ಮಟ್ಟದಲ್ಲಿ ಸಾಧನೆ ಮಾಡ್ತಿನಿ ಅಂತ ಅಂದುಕೊಂಡಿರಲಿಲ್ಲ. ನನ್ನ ಅಣ್ಣ-ತಂಗಿ, ತಂದೆ-ತಾಯಿ ಹಾಗೂ ಶಾಲೆಯ ಮುಖ್ಯಸ್ಥರು ನನಗೆ ಪ್ರೋತ್ಸಾಹಿಸಿದಕ್ಕೆ ಈ ಸಾಧನೆ ಮಾಡಿದ್ದೇನೆ. ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸುವ ಮಟ್ಟದಲ್ಲಿ ಫಲಿತಾಂಶ ಬಂದಿರುವುದು ತುಂಬಾನೆ ಖುಷಿ ತಂದಿದೆ ಅಂತಾರೆ ವಿದ್ಯಾರ್ಥಿ ಕಾರ್ತಿಕ್ ರೆಡ್ಡಿ.
ನೀಟ್ನಲ್ಲಿ ರಾಜ್ಯಕ್ಕೆ ಪ್ರಥಮ ಬಂದ ವಿದ್ಯಾರ್ಥಿ ಕಾರ್ತಿಕ್ ರೆಡ್ಡಿ ಕೊರೊನಾ ಕಾಲದಲ್ಲಿ ಲಾಕ್ಡೌನ್ ನಡುವೆಯೂ ಉಪನ್ಯಾಸಕರ ಸತತ ಪರಿಶ್ರಮ ಹಾಗೂ ವಿಧ್ಯಾರ್ಥಿಗಳಿಗೆ ಸ್ನೇಹ ರೀತಿಯಲ್ಲಿ ಬೋಧನೆ ಮಾಡಿದ್ದರಿಂದ ನಾವು ಉತ್ಸುಕತೆಯಿಂದ ವ್ಯಾಸಂಗ ಮಾಡಿದಕ್ಕೆ ಈ ಸಾಧನೆ ಮಾಡಲು ಸಾಧ್ಯವಾಯ್ತು ಅಂತಾರೆ ವಿದ್ಯಾರ್ಥಿ ಮಹಮ್ಮದ್ ಅರ್ಬಾಜ್ ಅಹ್ಮದ್.
ಕೇವಲ ಶಿಕ್ಷಣಕ್ಕಾಗಿ ಮಾತ್ರ ಶಾಹೀನ್ ಶಿಕ್ಷಣ ಸಂಸ್ಥೆ ವಿಧ್ಯಾರ್ಥಿಗಳನ್ನು ತಯಾರು ಮಾಡ್ತಿಲ್ಲ. ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬಲಿಷ್ಠಗೊಳಿಸುವ ಮೂಲಕ ಅವರು ದೇಶದ ಭವಿಷ್ಯದ ಅತ್ಯುತ್ತಮ ವೈದ್ಯಕೀಯ ಸೇವೆ ನೀಡಲೆಂದು ಮಾನಸಿಕವಾಗಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡ್ತಿರುವುದೇ ಇಂದಿನ ಫಲಿತಾಂಶಕ್ಕೆ ಕಾರಣವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಖದೀರ್ ಸಂತಸ ವ್ಯಕ್ತಪಡಿಸಿದ್ದಾರೆ.