ಬಸವಕಲ್ಯಾಣ :ಗೋವುಗಳು ಸೇರಿ ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಮುಕ್ತ ಸಮಾಜಕ್ಕಾಗಿ ಎಲ್ಲರೂ ಕೈ ಜೊಡಿಸಬೇಕು ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಕರೆ ನೀಡಿದ್ದಾರೆ.
ನಗರದ ತಾಪಂ ಆವರಣದಲ್ಲಿ 50 ಲಕ್ಷ ರೂ.ಗಳ ಅನುದಾನದಲ್ಲಿ ನಿರ್ಮಿಸಲಾಗುತ್ತಿರುವ ನೂತನ ತಾಲೂಕು ಪಂಚಾಯತ್ ಕಚೇರಿ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಮಾತನಾಡಿದ ಅವರು, ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಇಲ್ಲಿಯ ಶಾಸಕ ಬಿ.ನಾರಾಯಣರಾವ್ ಹಾಗೂ ಅಧಿಕಾರಿಗಳು ಆಸಕ್ತಿ ವಹಿಸಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ನೂತನ ತಾಲೂಕು ಪಂಚಾಯತ್ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವ ಪ್ರಭು ಚೌಹಾಣ್.. ನಮ್ಮ ಸಮುದಾಯದ ಗುರುಗಳಾದ ಸೇವಾಲಾಲ್ ಮಹಾರಾಜ ಅವರು ಕೂಡ ಗೋವುಗಳ ಪಾಲನೆ, ಪೋಷಣೆ ಮಾಡುತಿದ್ದರು. ಅವರಿಂದ ಪ್ರೇರಿತನಾದ ನಾನು, ನನಗೆ ಪಶು ಸಂಗೋಪನಾ ಇಲಾಖೆಯೇ ನೀಡಬೇಕು ಎಂದು ಸಿಎಂ ಬಳಿ ಕೇಳಿ ಪಡೆದಿದ್ದೇನೆ. ಗೋವುಗಳ ಸೇವೆ ತಾಯಿ ಸೇವೆ ಮಾಡಿದಂತೆ ಎಂದು ನನ್ನ ಭಾವನೆ. ನೀವು ಉಪಯೋಗಿಸಿದ ನಂತರ ರಸ್ತೆಯಲ್ಲಿ ಬಿಸಾಡುವ ಪ್ಲಾಸ್ಟಿಕ್ ವಸ್ತುಗಳನ್ನು ತಿಂದು ಜಾನುವಾರುಗಳು ಪ್ರಾಣ ಕಳೆದುಕೊಳ್ಳುತ್ತಿವೆ. ಜಾನುವಾರುಗಳು ಸೇರಿ ಪರಿಸರದ ಮೇಲೆ ದುಷ್ಪರಿಣಾಮ ಬಿರುತ್ತಿರುವ ಪ್ಲಾಸ್ಟಿಕ್ ವಸ್ತುಗಳನ್ನು ಯಾರು ಬಳಕೆ ಮಾಡಬಾರದು ಎಂದು ಮನವಿ ಮಾಡಿದರು.
ಮನುಷ್ಯ ಜನಿಸಿದ ನಂತರ ಮೊದಲು ನಾವು ತಾಯಿ ಎದೆಹಾಲು ಕುಡಿದರೆ, ನಂತರ ಗೋವುಗಳ ಹಾಲು ಕುಡಿಯುತ್ತೇವೆ. ಹೀಗಾಗಿ, ಗೋವು ನಮಗೆ ಎರಡನೆಯ ತಾಯಿ ಇದ್ದ ಹಾಗೆ. ಗೋವುಗಳನ್ನು ಕಸಾಯಿ ಖಾನೆಗಳಿಗೆ ಕಳಿಸಬಾರದು. ಗೋವು ಮರಣ ಹೊಂದಿದಾಗ ತಮ್ಮ ತಮ್ಮ ಜಮೀನಿನಲ್ಲಿಯೇ ಅಂತ್ಯಕ್ರಿಯೆ ನಡೆಸಬೇಕು ಎಂದು ವಿನಂತಿಸಿದರು.