ಬಸವಕಲ್ಯಾಣ(ಬೀದರ್): ಕಾಂಗ್ರೆಸ್ ಶಾಸಕ ಬಿ. ನಾರಾಯಣರಾವ್ ಅವರ ನಿಧನದಿಂದಾಗಿ ತೆರವಾಗಿರುವ ಸ್ಥಾನಕ್ಕೆ ಉಪಚುನಾವಣೆ ನಡೆಯತ್ತಿರುವ ಹಿನ್ನೆಲೆ ಜೆಡಿಎಸ್ ಅಭ್ಯರ್ಥಿ ಸೈಯದ್ ಯಾಶ್ರಬ್ ಅಲಿ ಖಾದ್ರಿ ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಉಮೇದುವಾರಿಕೆ ಸಲ್ಲಿಸಿದರು.
ಬಸವಕಲ್ಯಾಣ ಉಪ ಕದನ : ಹೆಚ್‌ಡಿಕೆ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದ ಜೆಡಿಎಸ್ ಅಭ್ಯರ್ಥಿ - ಉಪಚುನಾವಣೆ2021
ಬಸವಕಲ್ಯಾಣ ಉಪಚುನಾವಣೆ ಹಿನ್ನೆಲೆ ಜೆಡಿಎಸ್ ಅಭ್ಯರ್ಥಿ ಸೈಯದ್ ಯಾಶ್ರಬ್ ಅಲಿ ಖಾದ್ರಿ ಇಂದು ನಾಮಪತ್ರ ಸಲ್ಲಿಸಿದರು. ಅಭ್ಯರ್ಥಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸಾಥ್ ನೀಡಿದರು.
ನಾಮಪತ್ರ ಸಲ್ಲಿಕೆ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರ ಬೃಹತ್ ಸಮಾವೇಶದ ಹಿನ್ನೆಲೆ ನಗರಕ್ಕೆ ಆಗಮಿಸಿದ್ದ ಕುಮಾರಸ್ವಾಮಿ ಅವರಿಗೆ ಸಸ್ತಾಪೂರ್ ಬಂಗ್ಲಾ ಬಳಿ ಜೆಡಿಎಸ್ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತ ಕೋರಿದರು. ನಂತರ ಅಲ್ಲಿಂದ ನೇರವಾಗಿ ಮಿನಿ ವಿಧಾನ ಸೌಧಕ್ಕೆ ತೆರಳಿ ಸಹಾಯಕ ಆಯುಕ್ತರ ಕಚೇರಿಯಲ್ಲಿ ಅಭ್ಯರ್ಥಿ ತಮ್ಮ ನಾಮಪತ್ರ ದಾಖಲಿಸಿದರು. ಚುನಾವಣಾಧಿಕಾರಿಯಾಗಿರುವ ಸಹಾಯಕ ಆಯುಕ್ತ ಭುವನೇಶ್ ಪಾಟೀಲ್ ನಾಮಪತ್ರ ಸ್ವೀಕರಿಸಿದರು.
ಅರ್ಧ ಗಂಟೆ ಕಾಯ್ದ ಹೆಚ್‌ಡಿಕೆ: ನಾಮಪತ್ರ ಸಲ್ಲಿಸುವ ಸಂಬಂಧ ಮಿನಿವಿಧಾನಸೌಧಕ್ಕೆ ಆಗಮಿಸಿದ ಕುಮಾರಸ್ವಾಮಿ ಅಗತ್ಯ ದಾಖಲೆಗಳು ಇಲ್ಲದ ಕಾರಣ ಸುಮಾರು 30 ನಿಮಿಷಗಳ ಕಾಲ ಎಸಿ ಕಚೇರಿಯಲ್ಲಿಯೇ ಕಾಯ್ದು ಕುಳಿತ ಪ್ರಸಂಗ ಜರುಗಿತು. ನಾಮಪತ್ರ ಸಲ್ಲಿಸಲು ಅಗತ್ಯ ದಾಖಲೆಗಳನ್ನು ತರದ ಕಾರಣ ಸ್ವಲ್ಪ ವಿಳಂಬವಾಯಿತು.