ಬೀದರ್: ವಸತಿ ಯೋಜನೆಯಡಿಯಲ್ಲಿ ನಡೆದಿದೆ ಎನ್ನಲಾದ ದುರ್ಬಳಕೆ ವಿಚಾರದಲ್ಲಿ ಜಿಲ್ಲಾ ಪಂಚಾಯತ್ನಿಂದ ಯಾವುದೇ ಕಾರಣ ಕೇಳಿ ನೋಟಿಸ್ ನೀಡಿಲ್ಲ ಎಂದು ಜಿಲ್ಲಾ ಪಂಚಾಯತ್ ಸಿಇಒ ಗ್ಯಾನೇಂದ್ರಕುಮಾರ್ ಗಂಗ್ವಾರ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಭಾಲ್ಕಿ ವಿಧಾನಸಭೆ ಕ್ಷೇತ್ರದ ಶಾಸಕರಿಗೆ ಕಾರಣ ಕೇಳುವ ನೋಟಿಸ್ ನೀಡಲಾಗಿದೆ ಎನ್ನುವ ವಿಷಯ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದ್ರೆ ಜಿಲ್ಲಾ ಪಂಚಾಯತ್ ಕಚೇರಿಯಿಂದ ಶಾಸಕ ಈಶ್ವರ್ ಖಂಡ್ರೆ ಅವರಿಗೆ ಯಾವುದೇ ರೀತಿಯ ಕಾರಣ ಕೇಳುವ ನೋಟಿಸ್ ಜಾರಿಯಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹಾಗೂ ಮಾಧ್ಯಮಗಳಲ್ಲಿ ಪ್ರಕಟಗೊಂಡ ಕರಡು ಪತ್ರವು ಕಚೇರಿಯಿಂದ ಅಧಿಕೃತವಾಗಿ ರವಾನೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಭಾಲ್ಕಿ ವಿಧಾನಸಭೆಯಲ್ಲಿ ವಸತಿ ಯೋಜನೆ ದುರ್ಬಳಕೆ ಹಾಗೂ ಅವ್ಯವಹಾರದ ಕುರಿತು ಜಿಲ್ಲಾ ಪಂಚಾಯತ್ಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಖುದ್ದು ಜಿಪಂ ಸಿಇಒ ಗ್ಯಾನೇಂದ್ರಕುಮಾರ್ ಗಂಗ್ವಾರ, ವಾಟ್ಸಪ್ ಮೂಲಕ ಶಾಸಕ ಈಶ್ವರ್ ಖಂಡ್ರೆಗೆ ರವಾನಿಸಿದ ಪತ್ರ ಕಳುಹಿಸಿ ಈಗ ಆ ಪತ್ರ ಅಧಿಕೃತವಲ್ಲ ಎಂದು ಹೇಳ್ತಿರುವುದಕ್ಕೆ ದೂರುದಾರ ಡಿ.ಕೆ.ಸಿದ್ರಾಮ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಜಿಲ್ಲಾ ಪಂಚಾಯತ್ಗೆ ದೂರು ನೀಡಿದ್ದೆ. ಅದಕ್ಕೆ ಪ್ರತಿಯಾಗಿ ನನಗೊಂದು ಪತ್ರವನ್ನು ವಾಟ್ಸ್ಆ್ಯಪ್ ಮೂಲಕ ಸಿಇಒ ಅವರೇ ಖುದ್ದಾಗಿ ಹಾಕಿದ್ದಾರೆ. ಈಗ ಆ ಕರಡು ಪ್ರತಿ ಅಧಿಕೃತವಲ್ಲ ಎನ್ನುವುದಾದ್ರೆ ಅವರದ್ದೇ ಸಹಿ ಇರುವ ಕರಡು ಪತ್ರ ನಕಲಿಯಾಗಲು ಹೇಗೆ ಸಾಧ್ಯ. ಹಾಗೆನಾದ್ರು ಕಚೇರಿ ಹೆಸರು ದುರ್ಬಳಕೆ ಮಾಡಲಾಗಿದೆ ಎನ್ನುವುದಾದ್ರೆ ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಿ ಕ್ರಿಮಿನಲ್ ಮೊಕದಮೆ ದಾಖಲಿಸಲಿ ಎಂದು ಹೇಳಿದ್ದಾರೆ.