ಬೀದರ್: ಇಲ್ಲಿಯ ನೆಹರು ಕ್ರೀಡಾಂಗಣದಲ್ಲಿ ಆರಂಭಗೊಂಡ ಅಗ್ನಿಪಥ ಅಗ್ನಿವೀರರಿಗಾಗಿ ಭಾರತೀಯ ಸೈನ್ಯ (ಇಂಡಿಯನ್ ಆರ್ಮಿ) ಭರ್ತಿ ರ‍್ಯಾಲಿಗೆ ಭಾರಿ ಸಂಖ್ಯೆಯ ಯುವ ಪಡೆ ಆಗಮಿಸಿದೆ.
ಮೊದಲ ದಿನವಾದ ಸೋಮವಾರದಂದು ದೈಹಿಕ ಪರೀಕ್ಷೆಗೆ ಒಟ್ಟು 2049 ಅಭ್ಯರ್ಥಿಗಳು ಆನ್‍ಲೈನ್‍ನಲ್ಲಿ ನೋಂದಣಿ ಮಾಡಿದ್ದರು. ದೈಹಿಕ ಪರೀಕ್ಷೆಗಳಾದ ಓಟ, ಪುಲ್‍ಅಪ್ಸ್, ಉದ್ದ ಜಿಗಿತದಲ್ಲಿ 113 ಮಂದಿ ಉತ್ತೀರ್ಣರಾದರು. ಎರಡನೇ ದಿನವಾದ ಮಂಗಳವಾರದಂದು ದೈಹಿಕ ಪರೀಕ್ಷೆಯಲ್ಲಿ 269 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.
ದೈಹಿಕ ಪರೀಕ್ಷೆಗೆ ಒಟ್ಟು 2,132 ಅಭ್ಯರ್ಥಿಗಳು ಆನ್‍ಲೈನ್‍ನಲ್ಲಿ ನೋಂದಣಿ ಮಾಡಿದ್ದರು. ಈ ಪೈಕಿ 1909 ಅಭ್ಯರ್ಥಿಗಳು ಹಾಜರಾಗಿ ದೈಹಿಕ ಪರೀಕ್ಷೆಯಲ್ಲಿ ಭಾಗವಹಿಸಿದ್ದರು. ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಮುಂದಿನ ಲಿಖಿತ ಪರೀಕ್ಷೆಗೆ ಅರ್ಹರಾಗಿದ್ದಾರೆ.
ಭಾರತೀಯ ಸೈನ್ಯ ಭರ್ತಿ ರ‍್ಯಾಲಿ ಮೊದಲ ದಿನ ರಾಯಚೂರು ಹಾಗೂ ಎರಡನೇ ದಿನ ಕೊಪ್ಪಳ ಜಿಲ್ಲೆ ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಡಿ.22ರವರೆಗೆ ನೇಮಕಾತಿ ರ‍್ಯಾಲಿ ನಡೆಯಲಿದೆ. ಸೇನೆಯ ವಿವಿಧ ಹುದ್ದೆಗಳಿಗೆ ಭರ್ತಿ ನಡೆಯುತ್ತಿದೆ. ಆನ್‍ಲೈನ್ ಮೂಲಕ ಅರ್ಜಿ ಸ್ವೀಕರಿಸಿ, ಅದರಂತೆ ಭರ್ತಿಯ ಪ್ರಕ್ರಿಯೆ ಕೈಗೊಳ್ಳಲಾಗಿದೆ. ದಿನವೂ ಇಂತಿಷ್ಟು ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.
ಬೆಳಗಾವಿ ನೇಮಕ ವಲಯದ ಸೇನಾ ಅಧಿಕಾರಿಗಳು, ಸಿಬ್ಬಂದಿ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ಜಿಲ್ಲಾಡಳಿತ ಭರ್ತಿ ಕೆಲಸಕ್ಕೆ ಸಾಥ್ ನೀಡಿ, ವಿವಿಧ ವ್ಯವಸ್ಥೆ ಒದಗಿಸಿದೆ. ರ‍್ಯಾಲಿಗೆ ಆಗಮಿಸುವ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಕ್ರೀಡಾಂಗಣದ ಎಡ ಮತ್ತು ಬಲ ಭಾಗದಲ್ಲಿ ಸಂಚಾರಿ ಶೌಚಗೃಹ ವ್ಯವಸ್ಥೆಯನ್ನೂ ಮಾಡಲಾಗಿದೆ.
ಇದನ್ನೂ ಓದಿ:ಅನುಸೂಯಾ ಜಯಂತಿ: ದತ್ತಪೀಠಕ್ಕೆ ಸಾವಿರಾರು ಭಕ್ತರ ಆಗಮನ