ಬಸವಕಲ್ಯಾಣ (ಬೀದರ್):ಮಾರಕ ಕೊರೊನಾ ಹರಡದಂತೆ ತಡೆಗಟ್ಟುವಲ್ಲಿ ಸರ್ಕಾರಿ ವೈದ್ಯರು, ಅರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರ ಶ್ರಮ ಮಹತ್ವದ್ದು ಎಂದು ಶಾಸಕ ಬಿ. ನಾರಾಯಣರಾವ್ ಮೆಚ್ಚುಗೆ ವ್ಯಕ್ತಪಡಿಸಿದರು.
ಬಸವಕಲ್ಯಾಣ: ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮ ಬೀದರ್ ಜಿಲ್ಲಾ ಸಹಕಾರಿ ಬ್ಯಾಂಕ್‌ನಿಂದ ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳಿರುವ ಮಹಾರಾಷ್ಟ್ರದಿಂದ ಅಪಾರ ಸಂಖ್ಯೆಯಲ್ಲಿ ಜನ ರಾಜ್ಯಕ್ಕೆ ಮರಳಿ ಬಂದಿದ್ದಾರೆ. ಹೀಗಾಗಿ ನಾವು ಎಷ್ಟು ಜಾಗರೂಕರಾಗಿದ್ದರೂ ಸಾಲದು ಎಂದು ಎಚ್ಚರಿಸಿದರು.
ಸರ್ಕಾರ ಕೈಗೊಂಡ ಕ್ರಮಗಳು ಮತ್ತು ಅಧಿಕಾರಿಗಳ ಶ್ರಮದಿಂದಾಗಿ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಈ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಆರೋಗ್ಯ, ಕಂದಾಯ, ಪಂಚಾಯತ್ ರಾಜ್ ವ್ಯವಸ್ಥೆ, ಪೊಲೀಸ್ ಸೇರಿ ಇತರ ಇಲಾಖೆ ಸಿಬ್ಬಂದಿ ಕಾರ್ಯವನ್ನು ಗುರುತಿಸುವ ಕೆಲಸ ನಡೆಯಬೇಕು ಎಂದರು.
ಕೊರೊನಾ ಸಂಕಷ್ಟ ಕಾಲದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಸೇವೆ ಗಮನಿಸಿ ಡಿಸಿಸಿ ಬ್ಯಾಂಕ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು/ ಟಿಎಪಿಎಂಎಸ್ ಹಾಗೂ ಇತರ ಹಣಕಾಸು ಸಂಸ್ಥೆಯ ದಾನಿಗಳ ಮೂಲಕ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ನೀಡುತ್ತಿರುವುದಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.