ಬೀದರ್: ದೊಡ್ಡೋರಾದ್ರಾ ತಲೆ ಮ್ಯಾಲೆ ಕರ್ಚೀಫ್ ಹಾಕ್ಕೊಳ್ತಾರ್, ಹಳ್ಯಾನ್ ಮಂದಿಯಾದ್ರೇ ಟವಲ್ ಸುತ್ಕೋತಾರ್.. ಹೆಣ್ಮಕ್ಕಳಾದ್ರೇ ತಲೆ ಮ್ಯಾಲೆ ಶರಗಂತೂ ಇದ್ದಾ ಇರ್ತೈತಿ.. ಆದ್ರೇ, ಈ ಸಣ್ಣ್ ಸಣ್ಣ್ ಮಕ್ಕಳ್ ಪಾಡೇನ್‌ರೀ ಅಂತೀನಿ..
ಹೌದು, ಯದ್ವಾಯದ್ವಾ ಬಿಸಿಲಿನಿಂದಾಗಿ ಬೀದರ್ ಜನರ ಬಾಯೊಳಗೆ ಇದೇ ಮಾತು ಕೇಳಿ ಬರ್ತಿವೆ. ಇಂತಹ ಬಿಸಿಲಿನ್ಯಾಗ್ ಶಾಲೆಗೆ ಹೋಗೋ ಮಕ್ಕಳ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ಅಲಿಯುತ್ತಿವೆ. ಇದೇ ಬಿಸಿಲಿನ ಕಾರಣಕ್ಕೆ ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಯಲ್ಲಿ 15 ದಿನ ಶಾಲೆ ಲೇಟಾಗಿ ಶುರುವಾಗ್ತಿದೆ. ಸರ್ಕಾರ ಈ ಎರಡೂ ಜಿಲ್ಲೆಗಳ ಮಕ್ಕಳ ಬಗೆಗಿನ ಕಾಳಜಿಯನ್ನ ಬೀದರ್ ಮಕ್ಕಳ ಬಗ್ಗೆ ತೋರಿಸಿಲ್ಲ ಅನ್ನೋದು ಇಲ್ಲಿ ಸ್ಪಷ್ಟ. ಯಾಕಂದ್ರೇ, ಬೀದರ್ ಕೂಡ ಈಗೀಗ 42 ರಿಂ 43 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ.
ಬಿಸಿಲಿನ ತಾಪಕ್ಕೆ ಬೆಂದ ಬೀದರ್ ಜನ ಬಿಸಿಲೇನೋ ಭಯಂಕರವಾಗೈತಿ. ಆದರೆ, ಮಕ್ಕಳ ಹುರುಪು ಎಳ್ಳಷ್ಟೂ ಕಡಿಮೆ ಆಗಿಲ್ರೀ.. ಹೊಸ ಬಟ್ಟೆ, ಪುಸ್ತಕ, ಬ್ಯಾಗ್ ಹಾಕ್ಕೊಂಡು ಮಕ್ಕಳೇನೋ ಶಾಲೆಗೆ ಹೊಂಟಾವು. ಸೂರ್ಯನ ಹೊಡೆತಕ್ಕೆ ತಾಳಲಾರದೇ ಅಸ್ವಸ್ಥರಾಗ್ತಿದ್ದಾರೆ ಮಕ್ಕಳು. ಅದಕ್ಕಾಗಿ ಜೂನ್ 14ರಿಂದ ಶಾಲೆಗಳು ಪ್ರಾರಂಭವಾದ್ರೇ ಒಳ್ಳೇದು ಅಂತಿದ್ದಾರೆ ಸ್ಥಳೀಯರು. ಯಾಕಂದ್ರೇ, ಈಗಾಗಲೇ ಸರ್ಕಾರ ಇದೇ ದಿನಾಂಕದಿಂದಲೇ ಯಾದಗಿರಿ ಮತ್ತು ಕಲಬುರ್ಗಿಯಲ್ಲಿ ಶಾಲೆಗಳು ಆರಂಭವಾಗಲಿ ಅಂತಾ ಆದೇಶ ಹೊರಡಿಸಿದೆ. ಅದೇ ರೀತಿ ಇಲ್ಲೂ ಶಾಲೆ ಲೇಟಾಗಿ ಶುರುವಾಗಬೇಕಿದೆ. ಯಾಕಂದ್ರೇ, ಶಾಲೆಯಲ್ಲಿ ಕೂರಲಾಗದೇ ಮಕ್ಕಳು ಬೆವರುತ್ತಿವೆ. ಮೂಗಿನಿಂದ ರಕ್ತ ಸೋರುವುದು, ಚರ್ಮ ರೋಗ ಸೇರಿ ಉದರ ಸಂಬಂಧಿ ರೋಗಗಳೂ ಮಕ್ಕಳಿಗೆ ವಕ್ಕರಿಸುತ್ತಿವೆ. ಇದಕ್ಕೆಲ್ಲ ಉಷ್ಣಾಂಶವೇ ಕಾರಣ ಅಂತಿದ್ದಾರೆ ವೈದರು.
ಬೀದರ್ ಜಿಲ್ಲೆ ಶಿಕ್ಷಣ ಇಲಾಖೆ ಉಪನಿರ್ದೇಶಕರು ಮೊದಲೇ ಸರ್ಕಾರದ ಗಮನಕ್ಕೆ ತರದೇ ಇರುವುದು ಇಲ್ಲಿ ಸ್ಪಷ್ಟ. ಇನ್ನಾದರೂ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ. ಬಿಸಿಲಿನಿಂದಾಗುವ ಅನಾಹುತಗಳನ್ನ ತಪ್ಪಿಸಬೇಕಿದೆ.