ಕರ್ನಾಟಕ

karnataka

ETV Bharat / state

ಆಂಧ್ರದಿಂದ ಸೊಲ್ಲಾಪುರಕ್ಕೆ ಅಕ್ರಮ ಗಾಂಜಾ ಸಾಗಾಣಿಕೆ; ಆರೋಪಿಗಳ ಬಂಧನ - ​ ETV Bharat Karnataka

ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ಅಕ್ರಮವಾಗಿ ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ಆರೋಪಿಗಳನ್ನು ಭಾಲ್ಕಿ ಪೊಲೀಸರು ಬಂಧಿಸಿದ್ದಾರೆ.

ಅಕ್ರಮ ಗಾಂಜಾ ಸಾಗಾಣಿಕೆ
ಅಕ್ರಮ ಗಾಂಜಾ ಸಾಗಾಣಿಕೆ

By ETV Bharat Karnataka Team

Published : Oct 12, 2023, 10:48 PM IST

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಹೇಳಿಕೆ

ಬೀದರ್ :ಆಂಧ್ರಪ್ರದೇಶದಿಂದ ಭಾಲ್ಕಿ ಮಾರ್ಗವಾಗಿ ಸೊಲ್ಲಾಪುರಕ್ಕೆ ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಬೀದರ್‌-ನಾಂದೇಡ ರಾಷ್ಟ್ರೀಯ ಹೆದ್ದಾರಿ 50ರ ಹಾಲಹಿಪ್ಪರ್ಗಾ ಕ್ರಾಸ್ ಬಳಿ ಭಾಲ್ಕಿ ಪೊಲೀಸರು ಸೆರೆ ಹಿಡಿದಿದ್ದಾರೆ. ಬಂಧಿತರಿಂದ ಸುಮಾರು 25,65,000 ರೂ. ಮೌಲ್ಯದ 25.65 ಕೆ.ಜಿ ಗಾಂಜಾ ಹಾಗೂ 3 ಲಕ್ಷ ಮೌಲ್ಯದ ಟಾಟಾ ಇಂಡಿಕಾ ವಿಸ್ಟಾ ಕಾರು ವಶಕ್ಕೆ ಪಡೆಯಲಾಗಿದೆ ಎಂದು ಬೀದರ್​ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಹೇಳಿದರು.

ಗುರುವಾರ ಬೀದರ್​ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಇವರು ಬೀದರನ ಗುನ್ನಳ್ಳಿ ರಸ್ತೆ ಬಳಿಯ ರಿಕ್ಷಾ ಕಾಲೊನಿಯ ಮನೆಯೊಂದರಲ್ಲಿ ಗಾಂಜಾ ಶೇಖರಣೆ ಮಾಡಿಟ್ಟಿರುವುದಾಗಿ ತಿಳಿದು ಬಂದಿತ್ತು. ಬಳಿಕ ಅಲ್ಲಿಗೆ ಭೇಟಿ ನೀಡಿ ಹುಡುಕಿದಾಗ ಅಲ್ಲಿಯೂ ಸಹ ಶೇಖರಣೆ ಮಾಡಿಟ್ಟಿರುವ ಸುಮಾರು 21,40,000 ರೂ. ಮೌಲ್ಯದ 21.44 ಕೆಜಿ ಗಾಂಜಾ ಪತ್ತೆಯಾಗಿದೆ. ಗಾಂಜಾವನ್ನು ಕಾವಲು ಕಾಯುತ್ತಿದ್ದ ಓರ್ವನನ್ನೂ ಸಹ ಬಂಧಿಸಲಾಗಿದೆ.

ಪ್ರಕರಣದಲ್ಲಿ ಒಟ್ಟು 47,05,000 ರೂ. ಮೌಲ್ಯದ 47.09 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಖಾನಾಪೂರ ಗ್ರಾಮದಲ್ಲಿ ಈ ಹಿಂದೆ ನಡೆದ ಮೂರು ದ್ವಿಚಕ್ರ ವಾಹನಗಳು ಮತ್ತು ಒಂದು ಮನೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂದು ವಿಚಾರಣೆ ವೇಳೆಯಲ್ಲಿ ಬಾಯಿಬಿಟ್ಟಿದ್ದಾರೆ. ಗಾಂಜಾ ಮಾರಾಟ ಕೃತ್ಯದಲ್ಲಿ ಭಾಗಿಯಾಗಿದ್ದ ಮೂರು ಜನ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿಯೂ ಶೋಧ ಕಾರ್ಯ ನಡೆದಿದೆ ಎಂದು ಮಾಹಿತಿ ನೀಡಿದರು.

ಇತ್ತೀಚೆಗೆ ಬೀದರ್​ ಜಿಲ್ಲೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಭಾಗಿಯಾಗಿದ್ದ ಮೂರು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆನ್‌ಲೈನ್ ಮೂಲಕ ಕ್ರಿಕೆಟ್​ ಬೆಟ್ಟಿಂಗ್ ನಡೆಯುತ್ತಿದೆ ಎಂಬ ಮಾಹಿತಿ ಇದೆ. ಪೋಷಕರು ತಮ್ಮ ಮಕ್ಕಳ ಬ್ಯಾಂಕ್ ಖಾತೆಯ ಹಣ ವರ್ಗಾವಣೆಯ ಮೇಲೆ ನಿಗಾವಹಿಸಬೇಕು. ಜಿಲ್ಲೆಯ ನಾಗರಿಕರು ಹಾಗೂ ಯುವಕರು ಕ್ರಿಕೆಟ್​ ಬೆಟ್ಟಿಂಗ್‌ನಲ್ಲಿ ಭಾಗಿಯಾಗಬಾರದು. ಇಂತಹ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಜಿಲ್ಲೆಯಲ್ಲಿ ಮನೆ ಕಳ್ಳತನ ಪ್ರಕರಣಗಳನ್ನು ನಿಯಂತ್ರಿಸಲು ಸಾರ್ವಜನಿಕರು ಸಹಕರಿಸಬೇಕು. ತಮ್ಮ ಮನೆಗಳಿಗೆ ಸಿಸಿಟಿವಿ ಅಳವಡಿಸಬೇಕು. ತಾವು ಊರಿಗೆ ತೆರಳುವಾಗ ತಮ್ಮ ಮನೆಯ ಅಕ್ಕಪಕ್ಕದ ಮನೆಯವರಿಗೆ ಮಾಹಿತಿ ನೀಡಿ ತಮ್ಮ ಮನೆಯ ಮೇಲೆ ನಿಗಾ ಇಡುವಂತೆ ಹೇಳಬೇಕು. ಹೆಚ್ಚಿನ ದಿನಕ್ಕಾಗಿ ಊರಿಗೆ ತೆರಳುವಂತಿದ್ದರೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ತಮ್ಮ ಬಡಾವಣೆಯಲ್ಲಿ ಅಪರಿಚಿತ ವ್ಯಕ್ತಿಗಳು ಸಂಚರಿಸುವುದು ಕಂಡುಬಂದರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದರು.

ಈ ಸಂದರ್ಭದಲ್ಲಿ ಭಾಲ್ಕಿ ಪೊಲೀಸ್ ಉಪಾಧೀಕ್ಷಕ ಶಿವಾನಂದ ಪವಾಡಶೇಟ್ಟಿ, ಭಾಲ್ಕಿ ಗ್ರಾಮೀಣ ವೃತ್ತ ಸಿಪಿಐ ಗುರುಪಾದ ಎಸ್.ಬಿರಾದಾರ, ಪಿಎಸ್‌ಐ ವಿಶ್ವರಾಧ್ಯ ಸೇರಿದಂತೆ ಈ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದ ಪೊಲೀಸ್ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಇದನ್ನೂ ಓದಿ :ಬೀದರ್‌: ಗ್ಯಾಸ್ ಕಟ್ಟರ್​ ಬಳಸಿ ಎಟಿಎಂನಿಂದ ಹಣ ಲೂಟಿ

ABOUT THE AUTHOR

...view details