ಬೀದರ್:ಕಳೆದ ತಿಂಗಳು ಹೈದರಾಬಾದ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ವ್ಯಕ್ತಿಯಲ್ಲಿ ಕೊರೊನಾ ಸೋಂಕಿತ್ತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಲಾಕ್ಡೌನ್ ಆರಂಭಕ್ಕೂ ಮುನ್ನ ಸಾವನ್ನಪ್ಪಿದ ಒಲ್ಡ್ ಸಿಟಿ ನಿವಾಸಿಯಲ್ಲಿ ಕೊವಿಡ್-19 ಸೋಂಕಿತ್ತು. ಆದರೆ ಜಿಲ್ಲಾಡಳಿತ ಮೊದಲು ಆ ವ್ಯಕ್ತಿಯನ್ನು ಎರಡು ಬಾರಿ ಪರಿಕ್ಷೆಗೆ ಒಳಪಡಿಸಿದಾಗ ನೆಗೆಟಿವ್ ಬಂದಿತ್ತು. ನಂತರ ಆತನನ್ನು ಹೈದರಾಬಾದ್ ಆಸ್ಪತ್ರೆಯಲ್ಲಿ ಕುಟುಂಬಸ್ಥರು ದಾಖಲಿಸಿದ್ದರು. ಈ ವೇಳೆ ಮೃತಪಟ್ಟ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವುದು ಸತ್ಯ ಎಂದು ಈಶ್ವರ್ ಖಂಡ್ರೆ ಹೇಳಿದ್ದಾರೆ.
ಈ ಕುರಿತು ಜಿಲ್ಲಾಡಳಿತದೊಂದಿಗೆ ಚರ್ಚೆ ಮಾಡಿದಾಗ, ಮೃತ ವ್ಯಕ್ತಿ ತೆಲಂಗಾಣದಲ್ಲಿ ಸಾವನ್ನಪ್ಪಿದಕ್ಕೆ ನಮ್ಮ ಜಿಲ್ಲಾಡಳಿತ ಪ್ರಾಥಮಿಕ ಹಾಗೂ ಎರಡನೇ ಹಂತದ ಎಲ್ಲಾ ಸಂಪರ್ಕಿತರನ್ನು ಕ್ವಾರಂಟೆನ್ ಮಾಡಿದೆ.
ಪಾದರಾಯನಪುರ ಗಲಾಟೆ ತಪ್ಪಿತಸ್ಥರ ಮೇಲೆ ಕ್ರಮ:
ಬೆಂಗಳೂರಿನ ಪಾದರಾಯನಪುರ ಗಲಾಟೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ಅಲ್ಲದೆ ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಈಶ್ವರ್ ಖಂಡ್ರೆ ಆಗ್ರಹಿಸಿದ್ದಾರೆ. ಸರ್ಕಾರ ಆ ಭಾಗದಲ್ಲಿ ಕೈಗೊಂಡ ಕ್ರಮಕ್ಕೆ ತಮ್ಮ ಬೆಂಬಲವಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗವಾದರೆ ಅಂಥವರಿಗೆ ಕ್ಷಮೆ ಇಲ್ಲ. ತಪ್ಪು ಯಾರೇ ಮಾಡಿದ್ದರು ಶಿಕ್ಷೆ ಕೊಡಿ ಎಂದರು.