ಕರ್ನಾಟಕ

karnataka

ETV Bharat / state

ತಡವಾಗಿ ಬಂದ ವರದಿ: ಮದುವೆಯಾದ ದಿನವೇ ಆಸ್ಪತ್ರೆ ಸೇರಿದ ಮದುಮಗ - Corona to the bridegroom

ಕೊರೊನಾ ಪಾಸಿಟಿವ್ ವರದಿಯಿಂದಾಗಿ ಹುಲಸೂರು ತಾಲೂಕಿನ ಬೇಲೂರು ಗ್ರಾಮದ 25 ವರ್ಷದ ಯುವಕನೊಬ್ಬ ಮದುವೆಯಾದ ಕೆಲವೇ ಗಂಟೆಗಳಲ್ಲಿ ಆ್ಯಂಬುಲೆನ್ಸ್ ಹತ್ತಿ ಆಸ್ಪತ್ರೆ ಸೇರಿದ ಘಟನೆ ನಡೆದಿದೆ.

basavkalyana
ಮದುಮಗನಿಗೆ ಕೊರೊನಾ

By

Published : Jun 16, 2020, 8:59 AM IST

ಬಸವಕಲ್ಯಾಣ: ಮದುವೆಯಾಗಿ ಹಾಯಾಗಿ ಇರಬೇಕಿದ್ದ ಮದುಮಗನೊಬ್ಬ ಕೊರೊನಾದಿಂದಾಗಿ ಆಸ್ಪತ್ರೆ ಸೇರಿದ ಘಟನೆ ಹುಲಸೂರು ತಾಲೂಕಿನ ಬೇಲೂರು ಗ್ರಾಮದಲ್ಲಿ ನಡೆದಿದೆ.

ಕೊರೊನಾ ಪಾಸಿಟಿವ್ ವರದಿಯಿಂದಾಗಿ ಬೇಲೂರು ಗ್ರಾಮದ 25 ವರ್ಷದ ಯುವಕನೊಬ್ಬ ಮದುವೆಯಾದ ಕೆಲವೇ ಗಂಟೆಗಳಲ್ಲಿ ಆಂಬ್ಯುಲೆನ್ಸ್ ಹತ್ತಿ ಆಸ್ಪತ್ರೆ ಸೇರಿದ್ದಾನೆ. ಉದ್ಯೋಗ ಅರಸಿ ಮಹಾರಾಷ್ಟ್ರದ ಪೂನಾಕ್ಕೆ ಹೊಗಿ ಮೇ.19 ರಂದು ಸ್ವಗ್ರಾಮಕ್ಕೆ ಆಗಮಿಸಿದ ಯುವಕನಿಗೆ ಬಸವಕಲ್ಯಾಣ ನಗರದ ಸರ್ಕಾರಿ ಶಾಲೆಯೊಂದರಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಕ್ವಾರಂಟೈನ್ ಅವಧಿ ಪೂರ್ಣಗೊಂಡ ಕಾರಣ ಮೇ 30 ರಂದು ಈತನ ಗಂಟಲು ದ್ರವ ತಗೆದುಕೊಂಡು ತಪಾಸಣೆಗೆ ಕಳುಹಿಸುವ ಜೊತೆಗೆ ಅದೇ ದಿನ ಬಿಡುಗಡೆಗೊಳಿಸಿ ಮನೆಗೆ ಕಳುಹಿಸಲಾಗಿತ್ತು.

ಮದುವೆಯಾದ ದಿನವೇ ಆಸ್ಪತ್ರೆ ಸೇರಿದ ಮದುಮಗ

ಮನೆಗೆ ತೆರಳಿದ 16 ದಿನಗಳ ನಂತರ ಅಂದರೆ ಜೂ. 15 ರಂದು ಭಾಲ್ಕಿ ತಾಲೂಕಿನ ಕೋನ್ ಮೇಳಕುಂದಾ ಗ್ರಾಮದಲ್ಲಿ ಈತನ ಮದುವೆ ಕಾರ್ಯ ನೆರವೇರಿತ್ತು. ಆದರೆ, ಮದುವೆ ಮುಗಿಸಿಕೊಂಡು ಮನೆಗೆ ಬಂದ ವರನಿಗೆ ಶಾಕ್ ಕಾದಿತ್ತು. ಹದಿನೈದು ದಿನಗಳ ಹಿಂದೆ ತಪಾಸಣೆಗೆಂದು ಕಳುಹಿಸಿದ ಗಂಟಲು ಮಾದರಿಯಲ್ಲಿ ಕೊರೊನಾ ಸೋಂಕು ಇರುವುದು ಧೃಡಪಟ್ಟಿತ್ತು. ಹೀಗಾಗಿ ಈತನನ್ನು ಬೀದರ್ ಆಸ್ಪತ್ರೆಗೆ ಸಾಗಿಸಲೆಂದು ವೈದ್ಯರು ಹಾಗೂ ಸಿಬ್ಬಂದಿ ಆ್ಯಂಬುಲೆನ್ಸ್​​ ವಾಹನ ಸಹಿತ ಮನೆ ಮುಂದೆ ಹಾಜರಾದರು.

ಇನ್ನು ವೈದ್ಯರು ಹಾಗೂ ಆ್ಯಂಬುಲೆನ್ಸ್ ವಾಹನ ಕಂಡು ಕೆಂಡಾಮಂಡಲರಾದ ಸ್ಥಳೀಯರು ಮದುಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ತೀವ್ರ ವಿರೋಧ ವ್ಯಕ್ತಪಡಿಸಿದರು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್​ ಸಾವಿತ್ರಿ ಸಲಗರ, ಹಲಸೂರು ಠಾಣೆ ಪಿಎಸ್ಐ ಗೌತಮ ನೇತೃತ್ವದ ಅಧಿಕಾರಿಗಳ ತಂಡ ಸೋಂಕಿತ ಮದುಮಗನನ್ನು ಆಸ್ಪತ್ರೆಗೆ ಸಾಗಿಸಲು ಹರಸಾಹಸ ಪಟ್ಟರು.

ಆರೋಗ್ಯ ಇಲಾಖೆ ನಿರ್ಲಕ್ಷ್ಯದಿಂದ ಯುವಕ ಮದುವೆಯಾದ ದಿನವೇ ಆಸ್ಪತ್ರೆ ಸೇರುವಂತಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಮದುವೆಗೆ ಬಂದವರಿಗೆ ಸೋಂಕು ಹರಡುವ ಆತಂಕ ಎದುರುರಾಗಿದ್ದು, ಮದುವೆಯಲ್ಲಿ ಪಾಲ್ಗೊಂಡ ಜನರೆಷ್ಟು? ಅದರಲ್ಲಿ ಪ್ರಥಮ ಸಂಪರ್ಕಕ್ಕೆ ಬಂದವರೆಷ್ಟು ಎಂದು ಪತ್ತೆ ಹಚ್ಚುವ ಕೆಲಸ ತಾಲೂಕು ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

ABOUT THE AUTHOR

...view details