ಬೀದರ್:ಮಳೆ ರೌದ್ರಾವತಾರಕ್ಕೆ ಜಿಲ್ಲೆಯಾದ್ಯಂತ ಇಬ್ಬರು ಬಲಿಯಾಗಿದ್ದು, ಮೃತರ ಕುಟುಂಬಕ್ಕೆ ಸರ್ಕಾರ ತಕ್ಷಣ ತಲಾ 5 ಲಕ್ಷ ರೂಪಾಯಿ ಪರಿಹಾರ ಧನ ನೀಡಿದೆ.
ಜಿಲ್ಲೆಯ ಭಾಲ್ಕಿ ತಾಲೂಕಿನ ಸಾಯಗಾಂವ್ ಸೇತುವೆ ದಾಟುವಾಗ ಬೈಕ್ ಸವಾರ ಮನೋಜ ಗುಂಡಾಜಿ(34) ಎಂಬಾತ ನೀರಿನ ರಭಸಕ್ಕೆ ಬೈಕ್ ಸಮೇತ ಕೊಚ್ಚಿ ಹೋಗಿದ್ದು, 1 ಕಿ.ಮೀ ದೂರದಲ್ಲಿ ಹೆಣವಾಗಿ ಪತ್ತೆಯಾಗಿದ್ದಾನೆ. ವಿಷಯ ತಿಳಿದ ಭಾಲ್ಕಿ ತಹಶೀಲ್ದಾರ್ ಅಣ್ಣಾರಾವ್ ಪಾಟೀಲ್ ನೇತೃತ್ವದ ಅಧಿಕಾರಿಗಳ ತಂಡ ತಕ್ಷಣ ಸ್ಥಳಕ್ಕೆ ಬೇಟಿ ನೀಡಿ ಮೃತ ಯುವಕನ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಈ ಕುರಿತು ಮೆಹಕರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಳೆ ರೌದ್ರಾವತಾರ : ಇಬ್ಬರು ಜಲ ಸಮಾಧಿ, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರು. ಪರಿಹಾರ...! ಅಲ್ಲದೆ ಬೀದರ್ ತಾಲೂಕಿನ ಜನವಾಡ ಗ್ರಾಮದ ಸರ್ಕಾರಿ ಆಸ್ಪತ್ರೆ ಹಿಂಭಾಗದಲ್ಲಿನ ಮನೆ ಗೋಡೆ ಕುಸಿದು ಗುರಮ್ಮ(72) ಎಂಬ ವೃದ್ಧೆ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಜನವಾಡ ಪೊಲೀಸ್ ಠಾಣೆ ಪಿಎಸ್ಐ ಶಿವರಾಜ್ ಪಾಟೀಲ್ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಮೃತರ ಕುಟುಂಬಕ್ಕೆ ತಕ್ಷಣ ಪರಿಹಾರ:
ಮಳೆ ಅವಾಂತರಕ್ಕೆ ಬಲಿಯಾದ ಎರಡು ಕುಟುಂಬಗಳಿಗೆ ತಕ್ಷಣಕ್ಕೆ ಸರ್ಕಾರದ ನಿಯಮಾನುಸಾರ ತಲಾ 5 ಲಕ್ಷ ರೂ. ಪರಿಹಾರ ಧನ ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ. ಮೃತರ ವಾರಸುದಾರರ ಬ್ಯಾಂಕ್ ಖಾತೆಗೆ ಸರ್ಕಾರದ ಪರಿಹಾರಧನ ವಿಲೇವಾರಿ ಮಾಡಲಾಗಿದ್ದು, ಕುಟುಂಬಸ್ಥರಿಗೆ ಸಾಂತ್ವನ ಹೇಳಲಾಗಿದೆ. ಪ್ರಕೃತಿ ವಿಕೋಪ ಪರಿಹಾರ ತ್ವರಿತಗತಿಯಲ್ಲಿ ಮಾಡಲಾಗುತ್ತಿದ್ದು ಜಿಲ್ಲೆಯಾದ್ಯಂತ ಅತಿವೃಷ್ಠಿ ಹಾನಿ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅವರು 'ಈಟಿವಿ ಭಾರತ'ಕ್ಕೆ ಹೇಳಿದ್ದಾರೆ.