ಬೀದರ್: ಸತತ ನಾಲ್ಕು ಗಂಟೆಗಳ ಕಾಲ ಸುರಿದ ಗುಡುಗು ಸಹಿತ ಮಿಶ್ರಿತ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಕಮಲನಗರ ಪಟ್ಟಣ ಬಹುತೇಕ ಜಲಾವೃತವಾಗಿದ್ದು, ಅಪಾರ ಪ್ರಮಾಣದ ವಸ್ತುಗಳು ನೀರು ಪಾಲಾಗಿವೆ.
ಪಟ್ಟಣದ ಬಸ್ ನಿಲ್ದಾಣದ ಎದುರಿನ ಶಿವರಾಜ ಪಟ್ನೆ ಎಂಬಾತರ ಅಂಗಡಿ ಹಾಗೂ ಮನೆಯಲ್ಲಿ ಐದರಿಂದ ಆರು ಅಡಿ ನೀರು ನುಗ್ಗಿದೆ. ಅಲ್ಲದೆ ಮಾರುಕಟ್ಟೆಯಲ್ಲಿರುವ ಅಂಗಡಿಗಳಲ್ಲಿ ನೀರು ನುಗ್ಗಿ ಅನೇಕ ವಸ್ತು ನೀರು ಪಾಲಾಗಿವೆ.
ಕಿರಾಣಿ ಅಂಗಡಿಯಲ್ಲಿನ ಸುಮಾರು 10 ರಿಂದ 12 ಲಕ್ಷ ರೂಪಾಯಿ ಸಾಮಗ್ರಿಗಳು ನೀರು ಪಾಲಾಗಿವೆ. ನಮ್ಮ ಮಗಳ ಮದುವೆ ಸಿದ್ಧತೆ ಮಾಡಿಕೊಂಡಿದ್ದೆ. ಆದರೆ ಮಳೆ ಅವಾಂತರದಿಂದ ಎಲ್ಲವೂ ನಾಶವಾಗಿದೆ. ಪ್ರತಿ ವರ್ಷ ಚರಂಡಿ ನೀರು ಅಂಗಡಿ, ಮನೆಗಳಿಗೆ ನುಗ್ಗಿದ್ರು ಯಾರೊಬ್ಬರು ನಮ್ಮ ಗೋಳು ಕೆಳ್ತಿಲ್ಲ. ಈ ಬಾರಿ ಹೆಚ್ಚಾದ ಮಳೆಯಿಂದಾಗಿ ನಮ್ಮ ಬದುಕೆ ನೀರು ಪಾಲಾಗಿದೆ ಅಂತಾರೆ ನೊಂದವರು.
ಅಲ್ಲದೆ ಮಳೆಯಿಂದಾಗಿ ಬೀದರ್-ನಾಂದೇಡ ಹೆದ್ದಾರಿಯ ಸಂಚಾರ ಸ್ತಬ್ದವಾಗಿದೆ. ಕಮಲನಗರ ಸಮಿಪದ ಔರಾದ್, ಸೋನಾಳ, ಮದನೂರ ರಸ್ತೆಯ ಸೇತುವೆಗಳು ಮುಳುಗಡೆಯಾಗಿದ್ದು, ರಾತ್ರಿ ವಾಹನ ಸಂಚಾರ ಬಂದ್ ಆಗಿದಕ್ಕೆ ಸಾಕಷ್ಟು ಜನರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಕಮಲನಗರ, ಹುಮನಾಬಾದ್, ಔರಾದ್, ಭಾಲ್ಕಿ, ಬಸವಕಲ್ಯಾಣ ತಾಲೂಕಿನಾದ್ಯಂತ ಧಾರಾಕಾರ ಮಳೆಯಾಗಿದೆ ಎಂದು ತಿಳಿದು ಬಂದಿದೆ.