ಬೀದರ್: ಬಿಜೆಪಿ ನಾಯಕರು ಹಿಂದುತ್ವದ ಹೆಸರಿನಲ್ಲಿ ಯುವಕರನ್ನು ಗುಲಾಮರನ್ನಾಗಿ ಮಾಡಲಿಕ್ಕೆ ಹೊರಟಿದ್ದಾರೆ. ಯುವಕರೇ ಬಲಿಯಾಗಬೇಡಿ, ಎಚ್ಚರಿಕೆಯಿಂದಿರಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಯುವಕರಿಗೆ ಕರೆ ನೀಡಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ರಾಷ್ಟ್ರೀಯ ಪಕ್ಷಗಳು ಒಬ್ಬರ ಮೇಲೆ ಒಬ್ಬರು ಕಲ್ಲು, ಮೊಟ್ಟೆ, ಚಪ್ಪಲಿ ಎಸೆಯುವುದನ್ನು ಬಿಟ್ಟು ಜನರನ್ನು ನೆಮ್ಮದಿಯಿಂದ ಬದುಕಲು ಅವಕಾಶ ನೀಡಿ ಸಾಕು. ಮದರಸಾಗಳನ್ನು ಬ್ಯಾನ್ ಮಾಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಎರಡು ಸಮಾಜದ ನಡುವೆ ಸಂಘರ್ಷ ಸೃಷ್ಟಿಸಿ ಈಗ ಸಂಘ ಸಂಸ್ಥೆಗಳನ್ನು ಬ್ಯಾನ್ ಮಾಡಿ ಏನ್ ಸಾಧನೆ ಮಾಡುತ್ತೀರಿ? ನಾನು ಮುಖ್ಯಮಂತ್ರಿಯಾಗಿದ್ದಾಗ ಯಾಕೆ ಕೊಲೆಗಳಾಗಲಿಲ್ಲ? ಬಿಜೆಪಿ ಹಾಗೂ ಕಾಂಗ್ರೆಸ್ ಅವಧಿಯಲ್ಲೇಕೆ ಕೊಲೆಗಳಾಗುತ್ತಿವೆ? ಎಂದು ಪ್ರಶ್ನಿಸಿದರು.
ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣವನ್ನು ಎನ್ಐಎಗೆ ಕೊಡುತ್ತೇವೆಂದು ಹೇಳಿದ್ದಾರೆ. ಆದರೆ ಅವರಿಗೆ ಕೊಟ್ಟಿರುವ ಈ ಹಿಂದಿನ ಪ್ರಕರಣಗಳು ನಾಲ್ಕೈದು ವರ್ಷ ಕಳೆದರೂ ಏನಾಗಿವೆ ಎಂಬುದು ಯಾರಿಗೂ ಗೊತ್ತಾಗಿಲ್ಲ. ಹೀಗಿದ್ದಾಗ ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳಿಗೆ ಪ್ರವೀಣ್ ಕೊಲೆ ಪ್ರಕರಣವನ್ನು ಕೊಟ್ಟರೆ ಅದರ ತನಿಖೆ ಮುಗಿಸಲು ಎಷ್ಟು ವರ್ಷಗಳು ಬೇಕು ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಪ್ರವೀಣ್ ಕುಟುಂಬಕ್ಕೆ ಪರಿಹಾರ ಕೊಟ್ಟಿದ್ದು ಪಕ್ಷದಿಂದ: ಬಿ ವೈ ವಿಜಯೇಂದ್ರ
ಅಲ್ಲದೇ ಪ್ರವೀಣ್ ಕುಟುಂಬದ ಹೆಣ್ಣು ಮಕ್ಕಳು ಪ್ರಕರಣವನ್ನು ಎನ್ಐಎಗೆ ವಹಿಸಿ ಎಂದು ಕೇಳಿದ್ದಾರೆ. ಪಾಪ ಅವರಿಗೆ ಅದರ ಬಗ್ಗೆ ಗೊತ್ತಿಲ್ಲ. ಪ್ರಕರಣವನ್ನು ಕಠಿಣವಾದಂತಹ ತನಿಖೆ ನಡೆಸುವ ಅಧಿಕಾರಿಗಳು ನಮ್ಮಲ್ಲಿಯೇ ಇದ್ದಾರೆ. ಅವರಿಗೆ ಕೊಡಿ ಎಂದು ಹೇಳಿದ್ದಾರೆ. ರಾಜ್ಯದ ಕರಾವಳಿ ಭಾಗದಲ್ಲಿ ಕೊಲೆಯಾದವರ ಮೂವರ ನಿವಾಸಕ್ಕೆ ಭೇಟಿ ನೀಡುತ್ತೇನೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.