ಬೀದರ್ :ಬಯಲು ಸೀಮೆಯ ತುತ್ತ ತುದಿ ಬೀದರ್ ಜಿಲ್ಲೆಯಲ್ಲಿ ಸಾಕಷ್ಟು ವರ್ಷಗಳಿಂದ ಸಸಿ ನೆಡುವ ಕಾರ್ಯಕ್ರಮ ಅನುಷ್ಠಾನಗೊಂಡರು ನಿರ್ವಹಣೆ ಇಲ್ಲದೆ ಬೇಸಿಗೆಯಲ್ಲಿ ಒಣಗಿ ಹೋಗ್ತಿದ್ದವು. ಹೀಗಾಗಿ, ಅರಣ್ಯ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆ ಅನುಷ್ಠಾನಕ್ಕೂ ಮೊದಲೇ ಮೂಲೆ ಗುಂಪಾಗ್ತಿತ್ತು. ಇದಕ್ಕೆ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅವರು ಹೊಸ ದಾರಿಯೊಂದು ಹುಡುಕಿದ್ದಾರೆ.
'ಹಸಿರು ಕ್ರಾಂತಿ'ಗೆ ಬೀದರ್ ಜಿಲ್ಲಾಧಿಕಾರಿಯ ವಿನೂತನ ಪ್ರಯೋಗ ಬೀದರ್ ನಗರದ ವರ್ತುಲ್ ರಸ್ತೆಯ ನಡುವಿನಲ್ಲಿ ಹಸಿರು ಕ್ರಾಂತಿಗೆ ವಿನೂತನ ಯೋಜನೆ ಜಾರಿಗೆ ತಂದಿದ್ದಾರೆ. ನಗರದ ವಿವಿಧ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ಶಾಲಾ ಮಕ್ಕಳನ್ನು ಮನವೊಲಿಸುವ ಮೂಲಕ ಒಂದೊಂದು ಸಸಿ ನೆಡುವ ಮೂಲಕ ಅದು ಮರವಾಗುವವರೆಗೆ ಬೆಳೆಸುವ ಜವಾಬ್ದಾರಿ ವಹಿಸಿಕೊಳ್ಳುವ ಸಾಮೂಹಿಕ ಅಭಿಯಾನ ಆರಂಭಿಸಿದ್ದಾರೆ.
ಮೊದಲ ಹಂತದಲ್ಲಿ ಹೈದ್ರಾಬಾದ್ ಸಂಪರ್ಕ ಕಲ್ಪಿಸುವ ಚಿಕಪೇಟ್ ವರ್ತುಲ ರಸ್ತೆಯ ಮಧ್ಯ ಭಾಗದ ಡಿವೈಡರ್‌ನಲ್ಲಿ ಕಸ ಸ್ವಚ್ಛ ಗೊಳಿಸಿ ಅಲ್ಲಿ ಅರಣ್ಯ ಇಲಾಖೆ ನೀಡುವ ಸಸಿಗಳನ್ನು ನೆಡುವ ಕಾರ್ಯಕ್ರಮ ಆರಂಭಿಸಿದ್ದಾರೆ. ಪ್ರತಿದಿನ ಬೆಳಗಿನ ಜಾವದಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅವರು ರೋಟರಿ ಕ್ಲಬ್ ಮುಖಂಡರಾದ ಸೂರ್ಯಕಾಂತ ನಾಗಮಾರಪಳ್ಳಿ, ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ತಲಾ 10 ಮರಗಳನ್ನು ಪೋಷಣೆ ಮಾಡುವ ಜವಾಬ್ದಾರಿ ವಹಿಸಿದ್ದರು.
ಈ ಯೋಜನೆ ಅಡಿ ಸಾರ್ವಜನಿಕರು ಕೂಡ ಹೆಚ್ಚಿನ ಆಸಕ್ತಿ ತೋರುತ್ತಿದ್ದು 'ನನ್ನ ಮರ ನನ್ನ ಜವಾಬ್ದಾರಿ' ಎಂಬ ಘೋಷ ವಾಕ್ಯದ ಮೂಲಕ 'ಹಸಿರು ಕ್ರಾಂತಿ'ಗೆ ಜಿಲ್ಲಾಧಿಕಾರಿ ನಾಂದಿ ಹಾಡಲು ಹೊಸ ಪ್ರಯತ್ನ ಮಾಡುತ್ತಿದ್ದಾರೆ.