ಬೀದರ್ ಉತ್ಸವಕ್ಕೆ ಅದ್ಧೂರಿ ಚಾಲನೆ ಬೀದರ್: ಮನುಷ್ಯನ ಜೀವನದಲ್ಲಿ ಉತ್ಸವಗಳು ಬಹಳ ಅವಶ್ಯಕ. ಇವು ನಮ್ಮ ಬೌದ್ಧಿಕ ಬೆಳವಣಿಗೆಗೆ ಸಹಾಯಕವಾಗಿದೆ ಎಂದು ಕೇಂದ್ರ ನೂತನ ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಸಾಯನಿಕ ಮತ್ತು ರಸಗೊಬ್ಬರ ರಾಜ್ಯ ಖಾತೆ ಸಹ ಸಚಿವ ಭಗವಂತ ಖೂಬಾ ಹೇಳಿದರು. ಶನಿವಾರ ಸಂಜೆ ಬೀದರ್ ನಗರದ ಕೋಟೆ ಆವರಣದಲ್ಲಿ ವರ್ಣ ರಂಜಿತವಾಗಿ ನಿರ್ಮಿಸಲಾದ ಪ್ರಮುಖ ವೇದಿಕೆಯಲ್ಲಿ ಬೀದರ್ ಉತ್ಸವ-2023ಕ್ಕೆ ಅದ್ದೂರಿ ಚಾಲನೆ ನೀಡಿ ಮಾತನಾಡಿದರು.
ಬೀದರ್ ಉತ್ಸವ 2005 ರಿಂದ ಪ್ರಾರಂಭವಾಗಿದ್ದು, ಮಧ್ಯದಲ್ಲಿ ಬರಗಾಲ ಮತ್ತು ಕೋವಿಡ್ ಕಾರಣದಿಂದಾಗಿ ಬೀದರ್ ಉತ್ಸವ ಸ್ಥಗಿತಗೊಂಡಿತ್ತು. ಈ ವರ್ಷ ಜಿಲ್ಲೆ ಜನತೆಯ ಆಸೆಯಂತೆ ಪಕ್ಷಾತೀತವಾಗಿ ಉತ್ಸವ ಆಚರಿಸಲು ನಿರ್ಧರಿಸಲಾಗಿತ್ತು. ಅದರಂತೆಯೇ ಉತ್ಸವ ನಡೆಯುತ್ತಿದೆ. ಬೀದರ್ ಜಿಲ್ಲೆಯ ಜನತೆ ಉತ್ಸವದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದರಲ್ಲದೇ ಬೀದರ್ ಉತ್ಸವದ ಯಶಸ್ಸು ಕಂಡು ಕರ್ನಾಟದ ಮೂಲೆ ಮೂಲೆಯಿಂದ ಇದು ಚರ್ಚೆಗೆ ಬರುವಂತಾಗಬೇಕೆಂದರು.
ಪಶು ಸಂಗೋಪನೆ ಸಚಿವ ಪ್ರಭು ಬಿ. ಚವ್ಹಾಣ ಮಾತನಾಡಿ, ಬೀದರ್ ಜಿಲ್ಲೆಗೆ ಹಲವಾರು ಕಲಾ ತಂಡಗಳು ಬಂದಿವೆ. ಈ ನಾಡು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಬಸವಣ್ಣನವರ ಕರ್ಮ ಭೂಮಿಯಾಗಿದೆ. ಬೀದರ್ ಜಿಲ್ಲೆ ಪಾಪನಾಶ, ಶಿವ ದೇವಾಲಯ, ಗುರುದ್ವಾರ ಸೇರಿದಂತೆ ಹಲವಾರು ಐತಿಹಾಸಿಕ ಸ್ಥಳಗಳಿಗೆ ಹೆಸರುವಾಸಿಯಾಗಿದೆ ಎಂದು ಹೇಳಿದರು.
ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ ಮಾತನಾಡಿ, ಬೀದರ್ ಜಿಲ್ಲೆಯು ವಿಶೇಷ ಇತಿಹಾಸ, ಪರಂಪರೆ, ಸಂಸ್ಕೃತಿ ಹೊಂದಿದ್ದು, ಇಂತಹ ಉತ್ಸವಗಳ ಮೂಲಕ ಜನತೆ ತಿಳಿದುಕೊಳ್ಳಲು ಸಹಾಯವಾಗುತ್ತದೆ. ಬೀದರ್ ಉತ್ಸವ ಜನರಿಂದ ಜನರಿಗಾಗಿದ್ದು, ಈ ಉತ್ಸವ ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲರಿಗೂ ಅಭಿನಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೀದರ್ ಶಾಸಕ ರಹೀಮ ಖಾನ್, ಈ ವರ್ಷ ಬೀದರ್ ಉತ್ಸವ ಆಚರಣೆಗೆ ಬೆಂಬಲ ನೀಡಿದ ಎಲ್ಲಾ ಜನಪ್ರತಿನಿಧಿಗಳಿಗೆ ಹಾಗೂ ಬೀದರ್ನಗರದ ಸಾರ್ವಜನಿಕರಿಗೂ ಅಭಿನಂದನೆ ತಿಳಿಸಿದರು. ಈ ಉತ್ಸವ ವೀಕ್ಷಣೆಗೆ ಶಾಂತಿಯಿಂದ ಬಂದಿರುವುದು ಸಂತೋಷದ ಸಂಗತಿ. ಬೀದರ್ನಲ್ಲಿ ಶಾಂತಿ ಸೌಹಾರ್ದತೆ ಕಾಪಾಡುವುದು ಮತ್ತು ನಗರದ ಅಭಿವೃದ್ಧಿ ನನ್ನ ಮೊದಲ ಆದ್ಯತೆ. ನನ್ನ ಕೊನೆಯುಸಿರು ಇರುವವರೆಗೆ ಜನತೆಯ ಶ್ರೇಯೋಭಿವೃದ್ಧಿಗೆ ಶ್ರಮಿಸುವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಶೈಲೇಂದ್ರ ಕೆ. ಬೆಲ್ದಾಳೆ, ಬಸವಕಲ್ಯಾಣ ಶಾಸಕ ಶರಣು ಸಲಗರ, ವಿಧಾನ ಪರಿಷತ್ ಸದಸ್ಯ ರಘುನಾಥ್ ರಾವ್ ಮಲ್ಕಾಪೂರೆ, ಕರ್ನಾಟಕ ರಾಜ್ಯ ಹಜ್ ಸಮಿತಿ ಅಧ್ಯಕ್ಷ ರವೂಫುದ್ದಿನ್ ಕಛೇರಿವಾಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್ ಬಾಬು ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಸ್ವಾಗತಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶಿಲ್ಪಾ ಎಂ. ವಂದಿಸಿದರು. ಸ್ಥಳೀಯ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಇದನ್ನೂ ಓದಿ:ಕೋಟೆಯಲ್ಲಿ ಮೂರು ದಿನ ಬೀದರ್ ಉತ್ಸವ: ಸುದೀಪ್, ಶಿವರಾಜ್ಕುಮಾರ, ಡಾಲಿ ಧನಂಜಯ ಭಾಗಿ