ಬಸವಕಲ್ಯಾಣ(ಬೀದರ್):ಪ್ರಕೃತಿ ವಿಕೋಪದಿಂದ ರಾಜ್ಯದಲ್ಲಿ ಸಾವಿರಾರು ಜನ ಮನೆ,ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಸಂತ್ರಸ್ತರ ನೆರವಿಗೆ ಧಾವಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ತಾಹೇರ್ ಹುಸೇನ್ ಕಿಡಿಕಾರಿದರು.
ನೆರೆ ಸಂತ್ರಸ್ತರ ನೆರವಿಗೆ ಬಾರದ ಸರ್ಕಾರ.. ವೆಲ್ಫೇರ್ ಪಾರ್ಟಿ ನಾಯಕರ ಕಿಡಿ.. - ಕೇಂದ್ರ ಸರ್ಕಾರಗಳು ಸಂಪೂರ್ಣ ವಿಫಲ
ಪ್ರವಾಹ ಪೀಡಿತರ ನೆರವಿಗೆ ಧಾವಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ತಾಹೇರ್ ಹುಸೇನ್ ಕಿಡಿಕಾರಿದ್ದಾರೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರ ಸಮಸ್ಯೆಗಳಿಗೆ ಸ್ಪಂದಿಸಿ, ನಿರಾಶ್ರಿತರಿಗೆ ಸೂರು ಕಲ್ಪಿಸುವ ಜೊತೆಗೆ ಸಮಸ್ಯೆಯ ಸುಳಿಯಲ್ಲಿ ಸಿಲುಕಿರುವ ಬಡ ಜನರ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಪ್ರಕೃತಿ ವಿಕೋಪ ಹಾಗೂ ಪ್ರವಾಹ ಭೀತಿಯಿಂದ ಜನ ತತ್ತರಿಸಿ ತಮ್ಮ ಮನೆ ಆಸ್ತಿ-ಪಾಸ್ತಿ ಕಳೆದುಕೊಂಡು ಗಂಜಿ ಕೇಂದ್ರದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಕಾಟಾಚಾರಕ್ಕಾಗಿ ಕೇಂದ್ರ ಸರ್ಕಾರದಿಂದ ವೈಮಾನಿಕ ಸಮಿಕ್ಷೆ ನಡೆಸಿದೆ. ಸಮಿಕ್ಷೆ ನಡೆಸಿ ತಿಂಗಳುಗಳೆ ಕಳೆದರೂ ಜನರಿಗೆ ಯಾವುದೇ ಪರಿಹಾರ ಕಲ್ಪಿಸಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಾಂತ್ವನದ ಮಾತುಗಳು ಬಿಟ್ಟರೆ ಬಿಡಿಗಾಸು ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು. ಸಂತ್ರಸ್ತರ ಗಂಜಿ ಕೇಂದ್ರಗಳಲ್ಲಿ ಸರಿಯಾದ ಮೂಲಸೌಕರ್ಯ ಕಲ್ಪಿಸಲಾಗದೆ ರಾಜ್ಯ ಸರ್ಕಾರದ ಅಸಹಾಯಕತೆ ಪ್ರದರ್ಶಿಸುತ್ತಿದೆ ಎಂದು ಕಿಡಿಕಾರಿದ್ರು.
ಬಿಜೆಪಿಯವರು ದೇಶದಲ್ಲಿ ವಿರೋಧ ಪಕ್ಷದವರೇ ಇಲ್ಲದ ಹಾಗೆ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ವಿಪಕ್ಷದ ಸಂಸದ, ಶಾಸಕರನ್ನು ಪದವಿ, ಹಣದ ಆಮಿಷುಗಳನ್ನು ಒಡ್ಡಿ ತಮ್ಮತ್ತ ಬರಮಾಡಿಕೊಳ್ಳುತ್ತಿದ್ದಾರೆ. ಇದನ್ನು ಒಪ್ಪದವರ ವಿರುದ್ಧ ಸುಳ್ಳು ಆರೋಪಗಳಡಿ ಕೇಸುಗಳನ್ನು ಹಾಕಿ ಜೈಲಿಗೆ ಹಾಕುತ್ತೇವೆಂದು ಬೆದರಿಸುವ ಕೆಲಸ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವಕ್ಕೆ ಬೆಲೆ ನೀಡದೆ ಪೂರ್ವ ನಿಯೋಜನೆಯಂತೆ ಒಂದು ದೇಶ, ಒಂದು ಭಾಷೆ, ಒಂದೇ ಪಕ್ಷವೆಂಬಂತೆ ಯೋಜನೆ ರೂಪಿಸಿಕೊಳ್ಳಲು ಹೊರಟಿರುವ ಕೇಂದ್ರ ಬಿಜೆಪಿ ಸರ್ಕಾರ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೆ ಬುಡ ಮೇಲು ಮಾಡಲು ಹೊರಟಂತೆ ಕಾಣುತ್ತಿದೆ ಎಂದು ವಾಗ್ದಾಳಿ ನಡೆಸಿದರು.