ಬಸವಕಲ್ಯಾಣ(ಬೀದರ್) : ಹುಡುಗಿಯರಿಬ್ಬರು ಪರಸ್ಪರ ಪ್ರೀತಿಯ ಜಾಲಕ್ಕೆ ಸಿಲುಕಿ ಮದುವೆಯಾಗಲು ನಿರ್ಧರಿಸಿ, ಮನೆಯವರು ಒಪ್ಪದಿದ್ದಾಗ ಮನೆ ಬಿಟ್ಟು ಓಡಿ ಹೋದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸಲಿಂಗ ಪ್ರೀತಿಗೆ ನಿರಾಕರಣೆ: ಮನೆ ಬಿಟ್ಟು ಓಡಿ ಹೋಗಿದ್ದರು ಈ ಯುವತಿಯರು! - love in girls
ಇಬ್ಬರು ಯುವತಿಯರ ನಡುವೆ ಪ್ರೇಮಾಂಕುರವಾಗಿದೆ. ಈ ಹಿನ್ನೆಲೆ ಈ ಇಬ್ಬರು ಯುವತಿಯರು ಮದುವೆಯಾಗಲು ಮುಂದಾಗಿದ್ದಾರೆ. ಇದಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಇಬ್ಬರೂ ಮನೆ ಬಿಟ್ಟು ಓಡಿಹೋಗಿ ಈಗ ಮತ್ತೆ ತಮ್ಮ ಕುಟುಂಬ ಸೇರಿದ್ದಾರೆ.
ಹೌದು, ನಗರದ ನೀಲಾಂಬಿಕಾ ಕಾಲೇಜಿನಲ್ಲಿ ಪಿಯು ಅಭ್ಯಾಸ ಮಾಡಿದ ಇಬ್ಬರು ಯುವತಿಯರು, ಪರಸ್ಪರ ಪ್ರೀತಿಸಿದಲ್ಲದೆ, ಮದುವೆ ಆಗಿ ಜೀವನ ನಡೆಸಲು ನಿರ್ಧರಿಸಿ, ಊರು ಬಿಟ್ಟು ಬೆಂಗಳೂರು ಮಹಾನಗರಕ್ಕೆ ತೆರಳಿದ್ದರು. ಬಸವಕಲ್ಯಾಣ ತಾಲೂಕಿನ ಯದಲಾಪೂರ ಗ್ರಾಮದ ಯುವತಿ ಹಾಗೂ ಬಸವಕಲ್ಯಾಣ ತಾಲೂಕಿನ ಗಡಿರಾಯಪಳ್ಳಿ ಗ್ರಾಮದ ಯುವತಿಗೆ ಕಾಲೇಜು ಅಭ್ಯಾಸದ ವೇಳೆ ಪರಿಚಯವಾಗಿದ್ದು, ಯುವತಿಯರ ಗೆಳೆತನ ಸಲಿಂಗ ಪ್ರೀತಿಗೆ ತಿರುಗಿ ಜೀವನ ಸಂಗಾತಿಗಳಾಗಿ ಬದುಕಲು ಮುಂದಾಗಿದ್ದರು ಎನ್ನಲಾಗಿದೆ.
ಗಡಿರಾಯಪಳ್ಳಿ ಗ್ರಾಮದ ಯುವತಿಯ ಪಾಲಕರು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದು, ಮಗಳ ಪತ್ತೆಯಾಗಿ ಪೊಲೀಸರಲ್ಲಿ ಮನವಿ ಮಾಡಿದ್ದಾರೆ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೆರುತಿದ್ದಂತೆ ಬೆಂಗಳೂರಿನಿಂದ ಮರಳಿ ಪೊಲೀಸ್ ಠಾಣೆಗೆ ಆಗಮಿಸಿದ ಯುವತಿಯರನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳಿಸಲಾಗಿತ್ತು. ಪೊಲೀಸರ, ಪಾಲಕರ ಹಾಗೂ ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕರ ಮನವೊಲಿಕೆ ನಂತರ ಇವರು ಮದುವೆ ನಿರ್ಧಾರದಿಂದ ಹಿಂದೆ ಸರಿದು, ಅವರವರ ಮನೆ ಸೇರಿದ್ದಾರೆ. ಸಲಿಂಗ ಪ್ರೀತಿಯಿಂದಲೂ ದೂರ ಉಳಿಯಲು ನಿರ್ಧರಿಸಿದ್ದಾರೆ. ಹೀಗಾಗಿ ನಾನಾ ತಿರುವು ಪಡೆಯುತ್ತಿದ್ದ ಈ ಪ್ರಕರಣ ಆರಂಭಿಕ ಹಂತದಲ್ಲೆ ಸುಖಾಂತ್ಯ ಕಂಡಿದೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.