ಬೀದರ್: ಜಿಲ್ಲೆಯ ಹುಮನಾಬಾದ್ ತಾಲೂಕಿನ ಘೋಡವಾಡಿ ಗ್ರಾಮದ ಇಸ್ಮಾಯಿಲ್ ಖಾದ್ರಿ ದರ್ಗಾ ಹತ್ತಿರದ ಕೆರೆಗೆ ಈಜಲು ತೆರಳಿದ್ದ ನಾಲ್ವರು ನೀರು ಪಾಲಾದ ಘಟನೆ ಇಂದು ಸಂಭವಿಸಿದೆ.
ಹೈದ್ರಾಬಾದ್ನ ಬೋರಾಬಂಡಾ ನಿವಾಸಿಗಳಾದ ಸೈಯದ್ ಅಕ್ಬರ್ ಸೈಯದ್ ಉಸ್ಮಾನ್ (17), ಮಹಮದ್ ಜುಲೇದ್ ಖಾನ್(19), ಮಹಮದ್ ಫಾದಖಾನ್ ಸಲೀಂ ಖಾನ್ (18) ಮತ್ತು ಸೈಯದ್ ಜುನೇದ್ ಸೈಯದ್ ಖಾಲೆದ್ (15) ನೀರುಪಾಲಾದವರೆಂದು ತಿಳಿದುಬಂದಿದೆ. ನಾಲ್ವರ ಪೈಕಿ ಸೈಯದ್ ಅಕ್ಬರ್ ಶವ ಪತ್ತೆಯಾಗಿದ್ದು, ಉಳಿದವರ ಶವಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಹುಮನಾಬಾದ್ ಪೊಲೀಸ್ ಠಾಣೆಯ ಪಿಎಸ್ಐ ರವಿಕುಮಾರ್ ನಾಯ್ಕೋಡಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯರ ಸಹಕಾರದಿಂದ ಶವಗಳ ಪತ್ತೆಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.
ಘೋಡವಾಡಿ ಗ್ರಾಮದ ಇಸ್ಮೈಲ್ ಖಾದ್ರಿ ಈ ಭಾಗದ ಪ್ರಸಿದ್ಧ ದರ್ಗಾವಾಗಿದ್ದು ರಾಜ್ಯ ಸೇರಿದಂತೆ ನೆರೆ ರಾಜ್ಯಗಳ ಭಕ್ತರು ಕೂಡ ಇಲ್ಲಿಗೆ ಆಗಮಿಸುತ್ತಾರೆ. ಈಜಲು ಹೋದ ಈ ನಾಲ್ವರು ಕೂಡ ದರ್ಗಾ ದರ್ಶನಕ್ಕೆ ಬಂದಿದ್ದರು ಎಂದು ಮಾಹಿತಿ ಲಭ್ಯವಾಗಿದೆ. ಈ ಕುರಿತು ಹುಮನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.