ಬೀದರ್:ಭ್ರಷಾಚಾರಕ್ಕೆ ಕಡಿವಾಣ ಬೀಳದಿದ್ದರೆ ಶ್ರೀಲಂಕಾದ ಪರಿಸ್ಥಿತಿ ಭಾರತಕ್ಕೆ ಬಂದರೂ ಅಚ್ಚರಿ ಇಲ್ಲ. ಸರ್ಕಾರದಲ್ಲಿ ಯಾರೂ ಹೇಳೋರು ಕೇಳೋರು ಇಲ್ಲ, ಹಿಡಿತ ಇಲ್ಲ. ಹೈಕಮಾಂಡ್ಗೆ ಗೊತ್ತಿರೋದು ಬೆಂಕಿ ಹಚ್ಚುವ ಕೆಲಸ. ಚುನಾವಣೆಯಲ್ಲಿ ಹೇಗೆ ಗೆಲ್ಲಬೇಕು ಎನ್ನುವುದು ಮಾತ್ರ ಗೊತ್ತು. ಜನರ ಸಮಸ್ಯೆ ಅವರಿಗೆ ಬೇಕಾಗಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.
ಶನಿವಾರ ಜಿಲ್ಲೆಯ ಖಾಶೆಂಪುರ್ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲವೇ ಕೆಲವು ವ್ಯಕ್ತಿಗಳು ಒಂದು ಗಂಟೆಯಲ್ಲಿ 52 ಕೋಟಿ ಸಂಪಾದನೆ ಮಾಡುತ್ತಾರೆ ಅಂದರೆ ಬಡವರ ಪರಿಸ್ಥಿತಿ ಏನಾಗಬೇಕು. ಇಲ್ಲಿ ಯಾರಿಗೂ ದೇಶ ಉಳೀಬೇಕು, ದೇಶದ ಪ್ರಜೆಗಳು ಚೆನ್ನಾಗಿ ಬದುಕಬೇಕು ಎಂಬ ಆಸೆಯಿಲ್ಲ. ಕಾಂಗ್ರೆಸ್‌ನವರು ಇಂದು ಭ್ರಷ್ಟಾಚಾರದ ಬಗ್ಗೆ ಮಾತಾಡುತ್ತಾರೆ. ಲೋಕಾಯುಕ್ತ ಕಂಪ್ಲೀಟ್ ಆಗಿ ಕ್ಲೋಸ್ ಮಾಡಿದ್ದ ಅವರೇ ಎಂದು ದೂರಿದರು.
ಅಧಿಕಾರ ಸಿಕ್ಕರೆ ಲೋಕಾಯುಕ್ತಕ್ಕೆ ಬಲ:ಭ್ರಷ್ಟಾಚಾರದ ಬಗ್ಗೆ ಎರಡು ರಾಷ್ಟ್ರೀಯ ಪಕ್ಷಗಳು ಹೋರಾಟ ಮಾಡುತ್ತಿರುವುದು ಕೇವಲ ನಾಟಕ. ಕಾಂಗ್ರೆಸ್ ಹಾಗೂ ಬಿಜೆಪಿ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಮುಂದೆ ಸಂಪೂರ್ಣ ಬಹುಮತದೊಂದಿದೆ ಅಧಿಕಾರಕ್ಕೆ ಬಂದರೆ ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುತ್ತೇನೆ ಎಂದು ಹೇಳಿದರು.