ಬಸವಕಲ್ಯಾಣ(ಬೀದರ್): ಮುಂಬರುವ ಕ್ಷೇತ್ರ ಉಪ ಚುನಾವಣೆಯಲ್ಲಿ ದಿ. ಶಾಸಕ ಬಿ.ನಾರಾಯಣರಾವ್ ಅವರ ಕುಟುಂಬದ ಸದಸ್ಯರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದು ನಾರಾಯಣರಾವ್ ಅವರ ಅಭಿಮಾನಿಗಳು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ಧರಾಮಯ್ಯನವರಿಗೆ ಒತ್ತಾಯಿಸಿದರು.
ಉಪ ಚುನಾವಣೆಯಲ್ಲಿ ದಿ. ನಾರಾಯಣರಾವ್ ಕಟುಂಬಸ್ಥರಿಗೆ ಟಿಕೆಟ್ ನೀಡುವಂತೆ ಒತ್ತಾಯ ಅತಿವೃಷ್ಟಿ ಹಾನಿ ವಿಕ್ಷಣೆಗಾಗಿ ತಾಲೂಕಿಗೆ ಆಗಮಿಸಿದ್ದ ಸಿದ್ಧರಾಮಯ್ಯ ಅವರನ್ನು ಕಲಖೋರಾದಿಂದ ಬಸವಕಲ್ಯಾಣ ನಗರಕ್ಕೆ ಆಗಮಿಸುವ ಮಾರ್ಗ ಮಧ್ಯೆ ಅನೇಕ ಪ್ರಮುಖರು ಭೇಟಿ ಮಾಡಿದರು. ಈ ವೇಳೆ ಅವರು ನಾರಾಯಣರಾವ್ ಅವರ ಕುಟುಂಬದ ಸದಸ್ಯರಿಗೆ ಉಪ ಚುನಾವಣೆ ಟಿಕೆಟ್‌ನೀಡುವಂತೆ ಮನವಿ ಮಾಡಿದರು.
ಚಿಕನಾಗಾಂವ ತಾಂಡಾ, ಮುಡಬಿವಾಡಿ, ಮುಡಬಿ ಬಳಿ ಸಿದ್ಧರಾಮಯ್ಯನವರ ಕಾರು ಆಗಮಿಸುತಿದ್ದಂತೆ ಬಿ.ನಾರಾಯಣರಾವ್ ಅವರ ಪುತ್ರ ಗೌತಮ್ ಅವರ ಪರವಾಗಿ ಘೋಷಣೆ ಕೂಗಿದ ಅಭಿಮಾನಿಗಳು, ಅವರಿಗೆ ಟಿಕೆಟ್ ನೀಡುವಂತೆ ಮನವಿ ಪತ್ರ ಸಲ್ಲಿಸಿದರು. ಮುಡಬಿವಾಡಿ ಹಾಗೂ ಮುಡಬಿ ಗ್ರಾಮದ ಬಳಿ ಮನವಿ ಪತ್ರ ಸ್ವೀಕರಿಸಿದ ಸಿದ್ದರಾಮಯ್ಯ, ನಾರಾಯಣರಾವ್ ಅವರ ಪುತ್ರ ಗೌತಮ್ ಅವರಿಗೆ ಟಿಕೆಟ್ ಕೊಟ್ಟಲ್ಲಿ ಗೆಲ್ಲಿಸಿ ಕೊಡ್ತಿರಾ? ಎಂದು ಪ್ರಶ್ನಿಸಿ, ಗೆಲ್ಲಿಸಿ ಕೊಡುತ್ತೇವೆ ಅಂತ ಮಾತು ಕೊಟ್ಟಿರೆ ಟಿಕೆಟ್ ನೀಡುತ್ತೇವೆ ಎಂದು ಮಾರ್ಮಿಕವಾಗಿ ನುಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜನ, ಅವರ ಪುತ್ರ ಗೌತಮ್ ಅಥವಾ ಪತ್ನಿ ಮಲ್ಲಮ್ಮನವರಿಗೆ ಟಿಕೆಟ್ ನೀಡಿದಲ್ಲಿ ಖಂಡಿತಾ ಗೆಲ್ಲಿಸಿ ಕೊಡುತ್ತೇವೆ ಎಂದು ವಾಗ್ದಾನ ಮಾಡಿದರು.