ಬಸವಕಲ್ಯಾಣ:ನಗರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಅನೀಲ ಭೂಸಾರೆ ಒಂದೇ ದಿವಸ 1,400 ಬಡ ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಿದರು.
ತಾಲೂಕು ಬಿಜೆಪಿ ಸಹಕಾರದೊಂದಿಗೆ ಸವಿತಾ ಸಮಾಜ ಭವನದ ಬಳಿ ಸುಮಾರು 250 ಜನ ಬಡ ಕುಟುಂಬಗಳಿಗೆ ಆಹಾರ ಪದಾರ್ಥಗಳನ್ನು ಒದಗಿಸಿದರು. ಇದಕ್ಕೂ ಮುನ್ನ ಹುಲಸೂರ ಪಟ್ಟಣದಲ್ಲಿ ಸುಮಾರು 600 ಸೇರಿದಂತೆ ಹುಲಸೂರ ಭಾಗದ ವಿವಿಧ ಗ್ರಾಮಗಳಲ್ಲಿ ಆಹಾರದ ಕಿಟ್ ನೀಡಿದರು.
ಬಸವಕಲ್ಯಾಣ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಆಹಾರ ಪದಾರ್ಥಗಳ ಕಿಟ್ ವಿತರಣೆ ಬಿಜೆಪಿ ನಗರ ಘಟಕದ ಅಧ್ಯಕ್ಷ ಕೃಷ್ಣಾ ಗೋಣೆ ಮಾತನಾಡಿ, ಕೊರೊನಾ ಹರಡದಂತೆ ತಡೆಗಟ್ಟಲು ಸರ್ಕಾರದಿಂದ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಪ್ರತಿಯೊಬ್ಬರು ಮುಂಜಾಗೃತಾ ಕ್ರಮಗಳನ್ನು ಪಾಲಿಸಬೇಕು. ಅನಗತ್ಯವಾಗಿ ಯಾರೂ ಸಹ ಮನೆಯಿಂದ ಹೊರ ಬರಬಾರದು. ಮುಖಕ್ಕೆ ಮಾಸ್ಕ್, ಕೈಗೆ ಸ್ಯಾನಿಟೈಸರ್ ಬಳಸಬೇಕು. ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದರು.
ಇನ್ನು ತಾಲೂಕು ಗ್ರಾಮೀಣ ಘಟಕದ ಅಧ್ಯಕ್ಷ ಅಶೋಕ ವಕಾರೆ, ಪಕ್ಷದ ಎಸ್‌ಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ದೀಪಕ್ ಗಾಯಕವಾಡ, ನಗರಸಭೆ ಸದಸ್ಯ ದೀಪಕ ಗುಡ್ಡಾ, ಮುಖಂಡರಾದ ಅರವಿಂದ ಮುತ್ತೆ, ಶೋಭಾ ತೆಲಂಗ, ಬಸವರಾಜ ಡೋಣಗಾಂವಕರ್ ಸೇರಿದಂತೆ ಪಕ್ಷದ ಪ್ರಮುಖರು, ಪದಾಧಿಕಾರಿಗಳು ಉಪಸ್ಥಿತರಿದ್ದರು.