ಕರ್ನಾಟಕ

karnataka

ETV Bharat / state

ಬೀದರ್​​ನಲ್ಲಿ ಮಳೆ ಆರ್ಭಟ: ಮನೆಯೊಳಗೆ ನುಗ್ಗಿದ ನೀರು, ಮಾಳಿಗೆ ಮೇಲೆ ಆಶ್ರಯ ಪಡೆದ ಜನ... ಬೆಳೆ ಸರ್ವನಾಶ

ಬೀದರ್​ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ಭಾರೀ ಮಳೆಯಿಂದಾಗಿ ಅನೇಕ ಅವಾಂತರಗಳು ಸುಷ್ಟಿಯಾಗಿವೆ. ಹುಲಸೂರ ಬಳಿಯ ಮುಚಳಂಬಿ ಕೆರೆ ಒಡೆದು ನೀರು ಹರಿದ ಪರಿಣಾಮ ಕೆರೆಯಿಂದ ಗ್ರಾಮದವರೆಗೆ ಮೂರು ಕಿಲೋ ಮೀಟರ್​​ನಷ್ಟು ಪ್ರದೇಶದ ಜಮೀನಿನಲ್ಲಿನ ಮಣ್ಣು ಸಹಿತ ಬೆಳೆಗಳು ಕೊಚ್ಚಿ ಹೋಗಿವೆ. ಸರ್ಕಾರ ಹಾನಿ ಬಗ್ಗೆ ಸಮೀಕ್ಷೆ ನಡೆಸಿ, ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ವರುಣನ ಆರ್ಭಟಕ್ಕೆ ನಲುಗಿದ ಅನ್ನದಾತ
ವರುಣನ ಆರ್ಭಟಕ್ಕೆ ನಲುಗಿದ ಅನ್ನದಾತ

By

Published : Sep 17, 2020, 9:27 PM IST

Updated : Sep 17, 2020, 10:10 PM IST

ಬಸವಕಲ್ಯಾಣ (ಬೀದರ್​): ಒಡೆದ ಕೆರೆ ಕಟ್ಟೆಗಳು, ತುಂಬಿ ಹರಿಯುತ್ತಿರುವ ಸೇತುವೆಗಳು, ಕೊಚ್ಚಿ ಹೋದ ಬೆಳೆಗಳು, ಜಲಾವೃತ್ತವಾದ ಮನೆಗಳು. ತಾಲೂಕಿನ ಗ್ರಾಮೀಣ ಭಾಗದಲ್ಲಿ ಗುರುವಾರ ಸುರಿದ ಭಾರಿ ಮಳೆಯಿಂದಾಗಿ ಸೃಷ್ಟಿಯಾದ ಅವಾಂತರಗಳು ಇವು. ಕಳೆದ ಕೆಲ ದಿನಗಳಿಂದ ತಾಲೂಕಿನಾದ್ಯಂತ ಎಡಬಿಡದೆ ಸತತವಾಗಿ ಮಳೆ ಸುರಿಯುತ್ತಿದೆ.

ತಾಲೂಕಿನ ಕೋಹಿನೂರ ಗ್ರಾಮಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆಗೆ ಸರ್ಜವಳಗಾ ಕ್ರಾಸ್‌ ಬಳಿ ಇರುವ ಸೇತುವೆ, ವಡ್ಡರಗಾ ಸಮೀಪದ ಸೇತುವೆ, ಸಿರ್ಗಾರಪೂರ ಬಳಿಯ ಸೇತುವೆ, ಹುಲಸೂರ ಬಳಿಯ ಸೇತುವೆಗಳು ತುಂಬಿ ಹರಿದ ಪರಿಣಾಮ ಹಲವು ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವಂತೆ ಆಯಿತು. ಹುಲಸೂರ ಬಳಿಯ ಮುಚಳಂಬಿ ಕೆರೆ ಒಡೆದು ನೀರು ಹರಿದ ಪರಿಣಾಮ ಕೆರೆಯಿಂದ ಗ್ರಾಮದವರೆಗೆ ಮೂರು ಕಿಲೋ ಮೀಟರ್​​ನಷ್ಟು ಪ್ರದೇಶದಲ್ಲಿನ ಜಮೀನಿನಲ್ಲಿನ ಮಣ್ಣು ಸಹಿತ ಬೆಳೆಗಳು ಕೊಚ್ಚಿ ಹೋಗಿವೆ. ಹಾಲಳ್ಳಿಯಿಂದ ಹುಲಸೂರಗೆ ಸಂಪರ್ಕಿಸುವ ರಸ್ತೆ ಸಂಪರ್ಕ ಕಡಿತಗೊಂಡಿದೆ. ಗ್ರಾಮದ ವಾರ್ಡ್ ಸಂಖ್ಯೆ-1ರಲ್ಲಿಯ ಮನೆಗಳಿಗೆ ನೀರು ನುಗ್ಗಿ ಮನೆಗಳೆಲ್ಲ ಜಲಾವೃತ್ತಗೊಂಡಿದ್ದು, ಕೆಲವು ಮನೆಗಳ ಗೋಡೆ ಜಖಂಗೊಂಡಿವೆ.

ಮನೆಯೊಳಗೆ ನುಗ್ಗಿದ ನೀರು, ಮಾಳಿಗೆ ಮೇಲೆ ಆಶ್ರಯ ಪಡೆದ ಜನ

ಗೊರ್ಟಾ(ಬಿ) ಗ್ರಾಮದಲ್ಲಿ ಹಳ್ಳದ ನೀರು ಭೀಮ ನಗರ ಬಡಾವಣೆಯಲ್ಲಿ ನುಗ್ಗಿದ ಪರಿಣಾಮ 50ಕ್ಕೂ ಅಧಿಕ ಮನೆಯ ಜನರು ತೊಂದರೆಗೆ ಸಿಲುಕಿದ್ದಾರೆ. ಮನೆ ಒಳಗೆ ನೀರು ತುಂಬಿದ ಕಾರಣ ಜನರು ಕೆಲಕಾಲ ಮನೆಯ ಮಾಳಿಗೆ ಮೇಲೆ ಹೋಗಿ ಕುಳಿತರು.

ತಾಲೂಕಿನ ಸಿರ್ಗಾಪೂರ ಬಳಿಯ ಗಂಡೂರಿ ನಾಲಾ ಉಕ್ಕಿ ಹರಿದ ಪರಿಣಾಮ ಸಿರ್ಗಾಪೂರ, ಖೇರ್ಡಾ(ಕೆ) ಸೇರಿದಂತೆ ಸುತ್ತಲಿನ ಗ್ರಾಮಗಳ ವ್ಯಾಪ್ತಿಯಲ್ಲಿಯ ಜಮೀನಿನಲ್ಲಿ ನೀರು ನುಗ್ಗಿ ಫಲವತ್ತಾದ ಮಣ್ಣು ಸಹಿತ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಹಾನಿ ಬಗ್ಗೆ ಸಮೀಕ್ಷೆ ನಡೆಸಿ ಸರ್ಕಾರ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ನಗರದ ಬಸ್‌ ನಿಲ್ದಾಣ ಹಾಗೂ ಈ ಪ್ರದೇಶದಲ್ಲಿ ಮಳೆ ನೀರು ಹರಿದು ಅನೇಕ ಅಂಗಡಿಗಳು ಜಲಾವೃತ್ತಗೊಂಡರೆ, ಮುಖ್ಯ ರಸ್ತೆಯಲ್ಲಿ ಕೆಲಕಾಲ ಸಂಚಾರಕ್ಕೆ ಸಮಸ್ಯೆಯಾಯಿತು.

ಶೇ.35ರಷ್ಟು ಅಧಿಕ ಮಳೆ:

ಪ್ರಸಕ್ತ ಸಾಲಿನಲ್ಲಿ ಇದುವರೆಗೆ 598 ಎಂಎನಷ್ಟು ವಾಡಿಕೆ ಮಳೆಯಾಗಬೇಕಿತ್ತು. ಆದರೆ ಶೇ.35ರಷ್ಟು ಹೆಚ್ಚಿನ ಮಳೆಯಾಗಿದೆ. ತಾಲೂಕಿನಲ್ಲಿ ಒಟ್ಟು 46 ಸಾವಿರ ಎಕರೆ ಪ್ರದೇಶದಲ್ಲಿಯ ಬೆಳೆ ಹಾನಿಯಾಗಿದೆ. ತೊಗರಿ, ಸೋಯಾ, ಹೆಸರು, ಉದ್ದು, ಜೋಳ, ಎಳ್ಳು ಹೆಚ್ಚಿನ ಹಾನಿಯಾಗಿದೆ. ಬೆಳೆ ಹಾನಿ ಬಗ್ಗೆ ಈಗಾಗಲೇ ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೀರಶೆಟ್ಟಿ ರಾಠೋಡ ತಿಳಿಸಿದ್ದಾರೆ.

Last Updated : Sep 17, 2020, 10:10 PM IST

ABOUT THE AUTHOR

...view details