ಬೀದರ್ ಎಸ್ಪಿ ಚನ್ನಬಸವಣ್ಣ ಎಸ್ ಎಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದರು. ಬೀದರ್: ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಪತಿಯನ್ನೇ ಕೊಲೆ ಮಾಡಿದ್ದ ಖತರ್ನಾಕ ಲೇಡಿ ಹಾಗೂ ಆಕೆಯ ಪ್ರಿಯಕರನನ್ನು ಬೀದರ್ ಪೊಲೀಸರು ಬಂಧಿಸಿದ್ದಾರೆ.
ನವೆಂಬರ್ 11, 2023ರಂದು ಬೀದರ್ ತಾಲೂಕಿನ ಪೊಮಾ ತಾಂಡಾ ಸಮೀಪ ಅಲಿಯಂಬರ್ ನಡುವಿನ ರಸ್ತೆಯ ಬ್ರಿಡ್ಜ್ ಬಳಿ ಆಕೆಯ ಪತಿ ಅಮಿತ್ನ ಮೃತದೇಹ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾದ ಹಿನ್ನೆಲೆ ಸ್ಥಳಕ್ಕೆ ಹೋಗಿ ಪೊಲೀಸರು ಪರಿಶೀಲನೆ ಮಾಡಿದ್ದರು. ಈ ಪ್ರಕರಣದ ಬೆನ್ನತ್ತಿದ ಪೊಲೀಸರು ಅನುಮಾನಾಸ್ಪದವಾಗಿ ಕಂಡುಬಂದ ಹಲವರನ್ನು ತನಿಖೆಗೆ ಒಳಪಡಿಸಿದ್ದರು.
ಕೊಲೆಗೆ ಸುಪಾರಿ: ಪೊಮಾ ತಾಂಡಾದ ನಿವಾಸಿ ಪ್ರಿಯಕರ ರವಿ ಪಾಟೀಲ್ ಹಾಗೂ ಪತ್ನಿ ಚೈತ್ರಾ ಸೇರಿಕೊಂಡು ವೆಂಕಟ್ ಗಿರಿಮಾಜೆ, ಆಕಾಶ ಗಿರಿಮಾಜೆಗೆ ಪತಿ ಅಮಿತ್ ಕೊಲೆಗೆ ಸುಪಾರಿ ನೀಡಿದ್ದರು. ಫಾರ್ಮ್ ಹೌಸ್ಗೆ ಹೋಗಿ ದ್ವಿಚಕ್ರ ವಾಹನದ ಮೇಲೆ ವಾಪಸ್ ಬರುತ್ತಿದ್ದ ವೇಳೆ ಅಮಿತ್ಗೆ ರಾಡ್ನಿಂದ ಹೊಡೆದು ಕೊಲೆ ಮಾಡಲಾಗಿತ್ತು. ಪತ್ನಿ ಜನವಾಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆ ನಂತರ ಪೊಲೀಸರು ವಿಶೇಷ ತಂಡ ರಚಿಸಿ ಕೊಲೆ ಪ್ರಕರಣವನ್ನು ಗಭೀರವಾಗಿ ಪರಿಗಣಿಸಿ ತನಿಖೆ ಮಾಡಿದ್ದರು.
ಪರಿಶೀಲನೆ ಕೈಗೊಂಡ ವೇಳೆ, ಪ್ರಿಯಕರ ರವಿ ಪಾಟೀಲ್ ಎಂಬ ಆರೋಪಿ ತಮ್ಮ ಫಾರ್ಮ್ ಹೌಸ್ಗೆ ಅಮಿತನನ್ನು ಕರೆಯಿಸಿಕೊಂಡು, ವೆಂಕಟ್ ಗಿರಿಮಾಜೆ, ಆಕಾಶ ಗಿರಿಮಾಜೆ ಅವರಿಗೆ ಸುಪಾರಿ ಕೊಟ್ಟಿರುವ ಕುರಿತು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಎಸ್ಪಿ ಚನ್ನಬಸವಣ್ಣ ಎಸ್ ಎಲ್ ಅವರು ಮಾಧ್ಯಮದವರಿಗೆ ತಿಳಿಸಿದ್ದಾರೆ.
ಈ ಹಿಂದೆ ಕೂಡ ಅಮಿತ್ ಕೊಲೆಗೆ ಯತ್ನಿಸಿ ಆರೋಪಿ ರವಿ ಪಾಟೀಲ್ ವಿಫಲಗೊಂಡಿದ್ದನು. ಆದರೆ ಎರಡನೇ ಪ್ರಯತ್ನದಲ್ಲಿ ಅಮಿತನನ್ನು ಕೊಲೆ ಮಾಡುವಲ್ಲಿ ಯಶಸ್ವಿಯಾಗಿದ್ದನು ಎಂದು ಗೊತ್ತಾಗಿದೆ. ಪತ್ನಿ ಚೈತ್ರಾ ರವಿ ಪಾಟೀಲ್ ಇಬ್ಬರ ನಡುವೆ ಅನೈತಿಕ ಸಂಬಂಧ ಇರುವುದು ಅಮಿತ್ಗೆ ಸಂಶಯ ಬಂದು ವಿರೋಧಿಸಿದ್ದನು. ಇದರಿಂದ ಪತ್ನಿ ಚೈತ್ರಾ ಪ್ರಿಯಕರ ರವಿಗೆ ತನ್ನ ಪತಿಗೆ ಏನಾದರೂ ಮಾಡು ಎಂದಿದ್ದಕ್ಕೆ ಆರೋಪಿ ಸುಪಾರಿ ನೀಡಿ ಕೊಲೆಗೈದಿದ್ದನು ಎಂದು ಎಸ್ಪಿ ಚನ್ನಬಸವಣ್ಣ ಎಸ್ ಎಲ್ ಮಾಹಿತಿ ನೀಡಿದ್ದಾರೆ.
ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿ ಪಾಟೀಲ್, ಪತ್ನಿ ಚೈತ್ರಾ, ಸುಪಾರಿ ಪಡೆದಿದ್ದ ವೆಂಕಟ್ ಮತ್ತು ಆಕಾಶ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂಓದಿ:ಹಾಸನ : ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು ಕ್ಷುಲ್ಲಕ ಕಾರಣಕ್ಕೆ ಕೊಂದ ಪತಿ