ಬೀದರ್:ನೆರೆ ಸಂತ್ರಸ್ತರು ಭ್ರಮ ನಿರಸಗೊಂಡಿದ್ದುಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ತಲುಪಿದ್ದಾರೆ. ನಿರಾಶ್ರಿತರು ಸತ್ತ ಮೇಲೆ ಪರಿಹಾರ ಕೊಡುತ್ತೀರಾ ? ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಮಾಧ್ಯದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದಿಂದ ತಕ್ಷಣವೇ ಪರಿಹಾರ ಕೊಡುವ ಕೆಲಸ ಆಗಿಲ್ಲ. ಕೇಂದ್ರ ಸರ್ಕಾರದಿಂದ ಅಂತೂ ಒಂದು ನಯಾ ಪೈಸೆ ಬಂದಿಲ್ಲ. ನಾಳೆ ಕೊಡ್ತಾರೆ, ನಾಡಿದ್ದು ಕೊಡ್ತಾರೆ, ಪರಿಷ್ಕರಣೆ ಮಾಡ್ತಿದ್ದಾರೆ ಅಂತ ಆಡಳಿತಾತ್ಮಕ ನೆಪ ಹೇಳುತ್ತಿದ್ದಾರೆ. ಜನ ಎಷ್ಟು ಕಷ್ಟ ಪಡುತ್ತಿದ್ದಾರೆ ಎಂಬುದು ಕೆಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಅರ್ಥ ಆಗುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.
25 ಜನ ಸಂಸದರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ, ಹಿರಿಯ ನಾಯಕರು ಎಲ್ಲರೂ ಇದ್ದಾರೆ. ಜನರು ಬಿಜೆಪಿಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬೆಂಬಲ ನೀಡಿರುವಾಗ ಕೇಂದ್ರದಿಂದ ಅಥವಾ ರಾಜ್ಯದಿಂದ ಪರಿಹಾರ ನೀಡುವಲ್ಲಿ ಸಂಪೂರ್ಣ ವಿಫಲರಾಗಿರುವುದು ಬೇಸರ ತಂದಿದೆ ಎಂದರು.
ಸಂತ್ರಸ್ತರ ಬಗ್ಗೆ ಒಂದು ಟ್ವೀಟ್ ಮಾಡಿಲ್ಲ ಪ್ರಧಾನಿ:
ಲಕ್ಷಾಂತರ ಜನ ನಿರಾಶ್ರಿತರಾದರೂ ಪ್ರಧಾನಿ ನರೇಂದ್ರ ಮೋದಿ ಅವರು ಒಂದೇ ಒಂದು ಟ್ವೀಟ್ ಮಾಡಿಲ್ಲ. ಕನಿಕರ ತೊರದೆ, ಸಂತ್ರಸ್ತರ ದುಃಖದಲ್ಲಿ ಭಾಗಿಯಾಗದೆ ರಾಜ್ಯಕ್ಕೆ ಬಂದರೂ ನೆರೆಪೀಡಿತರ ಬಗ್ಗೆ ಒಂದೂ ಮಾತನಾಡದೆ ವಾಪಸ್ ಹೊಗಿದ್ದಾರೆ. 40 ದಿನಗಳಾದರೂ ಕೇಂದ್ರ ಸರ್ಕಾರ ಒಂದು ನಯಾ ಪೈಸೆ ಬಿಡುಗಡೆ ಮಾಡದಿರುವುದು ಅಕ್ಷಮ್ಯ ಅಪರಾಧ ಎಂದು ಖಂಡ್ರೆ ಕಿಡಿ ಕಾರಿದರು.
ಕಲ್ಯಾಣ ಕರ್ನಾಟಕ ಆದರೆ ಸಾಲದು:
ಹೈದ್ರಾಬಾದ್ ಕರ್ನಾಟಕ ಭಾಗವನ್ನು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದರೆ ಸಾಲದು, ಈ ಭಾಗದ ಎಲ್ಲಾ ವಿಧಾನಸಭೆ ಕ್ಷೇತ್ರಗಳ ಸಮಗ್ರ ಅಭಿವೃದ್ಧಿ ಆಗಬೇಕು. ಆದರೆ ಸಿಎಂ ಅವರ ವಿವೇಚನಾ ನಿಧಿಯಡಿಯಲ್ಲಿ 70 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಬಹುಪಾಲು ಬಿಜೆಪಿ ಹಾಗೂ ಅನರ್ಹ ಶಾಸಕರ ಕ್ಷೇತ್ರಗಳ ಪಾಲಾಗಿದೆ. ಅನುದಾನ ಹಂಚಿಕೆ ಮಾಡುವಲ್ಲೂ ತಾರತಮ್ಯ ಮಾಡುತ್ತಿರುವುದು ಈ ಭಾಗಕ್ಕೆ ಆಗುತ್ತಿರುವ ಅನ್ಯಾಯ ಎಂದು ಆರೋಪಿಸಿದರು.
ಸಚಿವ ಈಶ್ವರಪ್ಪಗೆ ಖಂಡ್ರೆ ಟಾಂಗ್:
ಬಿಜೆಪಿಗೆ ಮತ ಹಾಕಿದವರು ಭಾರತೀಯರು, ಹಾಕದೆ ಇರುವವರು ಪಾಕಿಸ್ತಾನಿಗಳು ಎಂಬ ಸಚಿವ ಈಶ್ವರಪ್ಪ ಅವರ ಹೇಳಿಕೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿರುವ ಅವಮಾನ. ದೇಶದಲ್ಲಿ ಸೇಡಿನ ರಾಜಕಾರಣ ಮಾಡಲಾಗುತ್ತಿದೆ, ಜಾತಿ ಜಾತಿಗಳ ನಡುವೆ ಜಗಳ ಹಚ್ಚಿ ಜನರ ದಿಕ್ಕು ತಪ್ಪಿಸಲಾಗುತ್ತಿದೆ. ಹಿರಿಯ ನಾಯಕ ಈಶ್ವರಪ್ಪnವರು ನಿರೀಕ್ಷೆ ಮಾಡದ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಸಾಧನೆ ಮಾಡಲು ಆಗದೆ ಜನರ ಗಮನ ಬೇರೆಡೆ ಸೆಳೆಯಲು ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಖಂಡ್ರೆ ಟಾಂಗ್ ಕೊಟ್ಟರು.