ಬಸವಕಲ್ಯಾಣ: ಭಾರತದ ಅದ್ಭುತ ರತ್ನ ಸರ್.ಎಂ.ವಿಶ್ವೇಶ್ವರಯ್ಯನವರು ನಾಡಿಗೆ ಮತ್ತು ದೇಶಕ್ಕೆ ನೀಡಿದ ಕೊಡುಗೆ ಅನನ್ಯವಾದುದು ಎಂದು ತಹಶೀಲ್ದಾರ್ ಸಾವಿತ್ರಿ ಸಲಗರ್ ಹೇಳಿದರು.
ಇಂಜಿನಿಯರ್ ದಿನಾಚರಣೆ ಉದ್ದೇಶಿಸಿ ತಹಶೀಲ್ದಾರ್ ಸಾವಿತ್ರ ಮಾತನಾಡಿದರು ಇಲ್ಲಿನ ಅಸೋಶಿಯೇಶನ್ ಆಫ್ ಸಿವಿಲ್ ಇಂಜಿನಿಯರ್ (ಬಿಎಸಿಇ)ನಿಂದ ಬಿಕೆಡಿಬಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 53ನೇ ಇಂಜಿನಿಯರ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬರಡು ಭೂಮಿಯನ್ನು ಹಸಿರಾಗಿಸಿದ ಕೀರ್ತಿ ವಿಶ್ವೇಶ್ವರಯ್ಯನವರಿಗೆ ಸಲ್ಲುತ್ತದೆ. ವಿಶ್ವೇಶ್ವರಯ್ಯನವರು ಜಗತ್ತಿನ ಶ್ರೇಷ್ಠ ಇಂಜಿನಿಯರ್ ಆಗಿದ್ದರು. ದಕ್ಷಿಣ ಕರ್ನಾಟದಲ್ಲಿ ಹೆಚ್ಚು ನೀರನ್ನು ನಿಲ್ಲಿಸಿ ಈ ಭಾಗವನ್ನು ಶ್ರೀಮಂತಗೊಳಿಸಿದ ಶ್ರೇಯಸ್ಸು ಅವರಿಗೆ ಸಲ್ಲಿಸಬೇಕು ಎಂದು ಹೇಳಿದರು.
ಶಿಸ್ತು, ಪ್ರಾಮಾಣಿಕತೆ, ಬದ್ಧತೆ ಸ್ವಾಭಿಮಾನದ ಪ್ರತೀಕವಾಗಿದ್ದ ವಿಶ್ವೇಶ್ವರಯ್ಯನವರ ಜೀವನ ಸಾಧನೆಯಿಂದ ನಾವೆಲ್ಲ ಸ್ಪೂರ್ತಿ ಪಡೆಯಬೇಕು. ಅವರು ತೋರಿದ ಮಾರ್ಗದಲ್ಲಿ ನಡೆಯಲು ಪ್ರಯತ್ನಿಸಬೇಕು ಎಂದರು.
ನಗರಸಭೆ ಪೌರಾಯುಕ್ತ ಗೌತಮ್ ಕಾಂಬಳೆ ಮಾತನಾಡಿ, ಕನ್ನಂಬಾಡಿ ಅಣೆಕಟ್ಟು ಕಟ್ಟುವ ಮೂಲಕ ಮೈಸೂರು, ಮಂಡ್ಯ, ಬೆಂಗಳೂರ ಭಾಗಕ್ಕೆ ನೀರಿನ ದಾಹ ನೀಗಿಸಿದ ಮಹಾನ್ ಚೇತನ ಸರ್ ಎಂ. ವಿಶ್ವೇಶ್ವರಯ್ಯನವರು ಎಂದರು.
ಈ ವೇಳೆ ಸಿದ್ರಾಮ ಬಿರಾದಾರ ಉಪನ್ಯಾಸ ನೀಡದರು. ಬಿಎಸಿಇ ಅಧ್ಯಕ್ಷ ಬಸವರಾಜ ಮುಸ್ತಾಪೂರೆ ಅಧ್ಯಕ್ಷತೆ ವಹಿಸಿದ್ದರು. ಬಿಎಸಿಇ ಉಪಾಧ್ಯಕ್ಷ ನಾಗರಾಜ ಪಾಟೀಲ್, ಪ್ರಧಾನ ಕಾರ್ಯದರ್ಶಿ ಉಮೇಶ ಶೀಲವಂತ, ಖಜಾಂಚಿ ಶ್ರೀಶೈಲ ವಾತಡೆ, ಸದಸ್ಯರಾದ ನಾರಾಯಣ ಬುನ್ನಾ, ವಸಂತ ನಾಯಕ, ಸುಧಾಕರ್ ಬಿರಾದಾರ, ಧೊಂಡೇರಾವ ಕುಲ್ಕರ್ಣಿ, ಮನೋಜಗೀರಿ, ಚನ್ನಬಸವ ಪಾಟೀಲ್, ಮಹಾಂತೇಶ ಉಳ್ಳೆ, ಸೋಮೇಶರೆಡ್ಡಿ, ಸಾಯಿ ಸ್ಟಿಲ್‌ನ ಮಾಲೀಕ ಬಸವರಾಜ ಮುರುಡ ಇದ್ದರು.