ಬೀದರ್: ಶಿಕ್ಷಣ ಇಲಾಖೆಯಿಂದ ಮಾನ್ಯತೆ ಪಡೆದು ತಗಡಿನ ಶೆಡ್ನಲ್ಲೇ ಶಾಲೆ ನಡೆಸುತ್ತಿದ್ದ ಆಡಳಿತ ಮಂಡಳಿಯ ಅಧ್ಯಕ್ಷನಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಖಾಸಗಿ ಶಾಲೆಗೆ ಶಿಕ್ಷಣ ಸಚಿವರ ಭೇಟಿ ತಾಲೂಕಿನ ಯಾಕತಪೂರ್ ಗ್ರಾಮದ ಇನ್ಫಂಟ್ ಜಿಸಸ್ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, 9 ವರ್ಷಗಳಿಂದ ಅನುಮತಿ ಪಡೆದು ತಗಡಿನ ಶಾಲೆಯಲ್ಲಿ ಮಕ್ಕಳಿಗೆ ಪಾಠ ಕಲಿಸ್ತಿರಾ...? ಇಂತಹ ವಾತಾವರಣದಲ್ಲಿ ಅದ್ಹೇಗೆ ಪಾಠ ಮಾಡಲಿಕ್ಕೆ ಸಾಧ್ಯ...? ನಿಮ್ಮ ಮಕ್ಕಳಿಗೂ ಇಂಥ ಶಾಲೆಯಲ್ಲಿಯೇ ದಾಖಲಿಸುತ್ತೀರಾ? ಎಂದು ತರಾಟೆ ತೆಗೆದುಕೊಂಡರು.
ಕಳೆದ ಸದನದಲ್ಲಿ ಪರಿಷತ್ ಸದಸ್ಯ ಅರವಿಂದಕುಮಾರ್ ಅರಳಿ ಅವರು ಜಿಲ್ಲೆಯ ಖಾಸಗಿ ಶಾಲೆಗಳ ದುರಾಡಳಿತದ ಕುರಿತು ಗಮನ ಸೆಳೆದಿದ್ದರು. ಜಿಲ್ಲೆಯ ಕಮಲನಗರ ತಾಲೂಕಿನ ತೊರಣಾ ಹಾಗೂ ಕಮಲನಗರ ಪಟ್ಟಣದ ಸಿದ್ದಮ್ಮ ಹಿರಿಯ ಪ್ರಾಥಮಿಕ ಶಾಲೆ ಕುರಿತು ಚರ್ಚಿಸಲಾಗಿತ್ತು.
ಜಿಲ್ಲಾ ಪ್ರವಾಸದಲ್ಲಿದ್ದ ಸಚಿವರು ಶಾಲೆಗೆ ಭೇಟಿ ನೀಡಿ, ಈ ರೀತಿ ಶಾಲೆಯನ್ನು ನಡೆಸಲು ಅನುಮತಿ ನೀಡಿದ ಆಡಳಿತ ಮಂಡಳಿಯವರ ಮೇಲೆ ಕ್ರಮ ಕೈಗೊಳ್ಳುವಂತೆ ಹಾಗೂ ಅಕ್ರಮ ಶಾಲೆಗಳ ಮಾನ್ಯತೆ ರದ್ದು ಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆಯಲ್ಲಿ ಪರಿಷತ್ ಸದಸ್ಯ ಅರವಿಂದಕುಮಾರ್ ಅರಳಿ, ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಉಪಸ್ಥಿತರಿದ್ದರು.