ಬಸವಕಲ್ಯಾಣ: ಜನರನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ ರೇಷನ್ ಹಾಗೂ ಸೀಮೆ ಎಣ್ಣೆ ಕೊಡುವ ರೀತಿ ಮಸ್ಕಿ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹಣ ಹಂಚುತ್ತಿದ್ದಾರೆ. ಚುನಾವಣಾ ಆಯೋಗ ತಕ್ಷಣ ಇವರನ್ನು ಅನರ್ಹಗೊಳಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಸವಕಲ್ಯಾಣ ನಗರದಲ್ಲಿ ಪಕ್ಷದ ಅಭ್ಯರ್ಥಿ ಮಾಲಾ ಬಿ ನಾರಾಯಣರಾವ್ ಪರ ಪ್ರಚಾರ ಹಿನ್ನೆಲೆ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಹಣ ಹಂಚುತಿದ್ದರೂ ಕೂಡ ಸುಮ್ಮನೆ ಕುಳಿತು ಬಿಜೆಪಿ ಏಜಂಟರಂತೆ ವರ್ತಿಸುತ್ತಿರುವ ರಾಯಚೂರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ತಕ್ಷಣ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಮಸ್ಕಿಯಲ್ಲಿ ಬಿಜೆಪಿ ಅಭ್ಯರ್ಥಿ ಮತದಾರರಿಗೆ ತಲಾ 300 ರೂ. ಹಂಚುತ್ತಿರುವ ವಿಡಿಯೋ ವೈರಲ್ ಆಗಿದೆ. ಬಿಜೆಪಿಗೆ ಇದಕ್ಕಿಂತ ದೊಡ್ಡ ಅವಮಾನ ಮತ್ತೊಂದಿಲ್ಲ. ತಕ್ಷಣ ಬಿಜೆಪಿ ಅಭ್ಯರ್ಥಿಯನ್ನು ರಾಜ್ಯ ಚುನಾವಣೆ ಆಯೋಗ ಅನರ್ಹಗೊಳಿಸಬೇಕು. ಕೂಡಲೇ ರಾಯಚೂರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ವರ್ಗಾವಣೆಗೊಳಿಸಬೇಕು.
ಎಸ್ಪಿ, ಡಿಸಿ ಸಮ್ಮುಖದಲ್ಲೇ ಈ ಅಕ್ರಮ ನಡೆಯುತ್ತಿದೆ. ಒಂದು ಪಕ್ಷದ ಏಜೆಂಟರಂತೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಇದರ ವಿರುದ್ಧ ಕಾಂಗ್ರೆಸ್ ಹೋರಾಟ ಮುಂದುವರಿಸಲಿದೆ. ಚುನಾವಣೆಗಳು ನ್ಯಾಯಸಮ್ಮತವಾಗಿ ನಡೆಯಬೇಕು ಎಂದು ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಯಾವ ವರ್ಗದ ಪರವೂ ಕೆಲಸ ಮಾಡುತ್ತಿಲ್ಲ. ರೈತರ ಪರವಾಗಿಯೂ ಇಲ್ಲ, ಕಾರ್ಮಿಕರ ಪರವಾಗಿಯೂ ಇಲ್ಲ. ಹೋರಾಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಬಾರದು ಅಂತ ಏನಿಲ್ಲ. ಸಾರಿಗೆ ನೌಕರರನ್ನು ಕರೆದು ಮಾತಾಡಬೇಕು. ಆ ಕೆಲಸ ಮಾಡುತ್ತಿಲ್ಲ. ಅಧಿಕಾರದ ದರ್ಪ ಬಿಜೆಪಿಗೆ ಹೆಚ್ಚಾಗಿದೆ. ಈ ಸರ್ಕಾರಕ್ಕೆ ಹೆಚ್ಚು ಕಾಲ ಉಳಿಗಾಲವಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:'ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲುವ ಸತ್ಯ ಸಿದ್ದರಾಮಯ್ಯಗೆ ಗೊತ್ತಿದೆ': ಬೊಮ್ಮಾಯಿ
ಬಿಜೆಪಿ ಈ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ಹೆಸರು ಮರುನಾಮಕರಣ ಮಾಡಿದ್ದು ಬಿಟ್ಟರೆ ಏನೇನೂ ಅಭಿವೃದ್ಧಿಪರ ಕೆಲಸ ಮಾಡಿಲ್ಲ. ಬಿಜೆಪಿ ಕಲ್ಯಾಣ ಕರ್ನಾಟಕ ಭಾಗಕ್ಕೆ 20 ತಿಂಗಳಲ್ಲಿ ಎಷ್ಟು ದುಡ್ಡು ಕೊಟ್ಟಿದೆ ? ಕಾಂಗ್ರೆಸ್ ಆರಂಭಿಸಿದ ಅನುಭವ ಮಂಟಪಕ್ಕೆ ಅಡಿಗಲ್ಲು ಹಾಕಿದ್ದು ಬಿಟ್ಟರೆ ನಯಾ ಪೈಸೆ ಅನುದಾನ ನೀಡಿಲ್ಲ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 1,500 ಕೋಟಿ ರೂ. ಕೊಡುತ್ತೇವೆ ಎಂದಿದ್ದರು, ಭರವಸೆ ನಿಜ ಆಯ್ತಾ ? ಮಾಧ್ಯಮದವರು ಈ ಬಗ್ಗೆ ಸರ್ಕಾರಕ್ಕೆ ಪ್ರಶ್ನೆ ಎತ್ತಬೇಕು ಎಂದರು.
ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಏನು ಕ್ರಮ ಕೈಗೊಂಡಿದೆ. ಜನರಿಗೆ ಉದ್ಯೋಗ ನೀಡುವ ಭರವಸೆ ಏನಾಯ್ತು ? ಕಾಂಗ್ರೆಸ್ ಪಕ್ಷ 2023ಕ್ಕೆ ಅಧಿಕಾರಕ್ಕೆ ಬಂದರೆ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು 6ಸಾವಿರ ರೂ. ಭತ್ಯೆ ನೀಡಲಾಗುವುದು. ಮುಂದಿನ ಚುನಾವಣೆ ಪ್ರಣಾಳಿಕೆಯಲ್ಲಿ ಈ ಅಂಶ ಸೇರಿಸಲಾಗುವುದು. ಈಗಾಗಲೇ ಕೇರಳದಲ್ಲಿ ಸೇರಿಲಾಗಿದೆ ಎಂದರು.