ಬೀದರ್ :ಬಸವಕಲ್ಯಾಣ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಲಬುರಗಿ ಜಿಲ್ಲೆಯ ಶರಣು ಸಲಗಾರ ಅವರನ್ನು ಘೋಷಣೆ ಮಾಡುತ್ತಿದ್ದಂತೆ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ನೇತೃತ್ವದಲ್ಲಿ ಸ್ಥಳೀಯ ಟಿಕೆಟ್ ಆಕಾಂಕ್ಷಿಗಳು ಪಕ್ಷದ ನಾಯಕರ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಶರಣು ಸಲಗಾರಗೆ ಬಿಜೆಪಿ ಟಿಕೆಟ್ ನೀಡುತ್ತಿದ್ದಂತೆ ಪಕ್ಷದಲ್ಲಿ ಸಾಕಷ್ಟು ಭಿನ್ನಮತ ಸ್ಫೋಟಗೊಂಡಿತ್ತು. ಬಿಜೆಪಿ ಕಾರ್ಯಕರ್ತರು ಸಂಸದ ಭಗವಂತ ಖೂಬಾ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ಮಾಡಿದ್ದರು. ಇದರ ಬೆನ್ನಲ್ಲೆ, ಇಂದು ಮಲ್ಲಿಕಾರ್ಜುನ ಖೂಬಾ ಕಾರ್ಯಕರ್ತರೊಂದಿಗೆ ತಮ್ಮ ಮನೆಯಲ್ಲಿ ಸಭೆ ನಡೆಸಿದ್ದಾರೆ.
ಬಿಜೆಪಿ ನಮ್ಮ ಮಾತೃ ಸಮಾನ ಪಕ್ಷ, ಮೋಸ ಮಾಡಲ್ಲ. ನಮ್ಮಲ್ಲೇ ಇಷ್ಟು ಸಮರ್ಥ ಆಕಾಂಕ್ಷಿಗಳಿರಬೇಕಾದರೆ, ಹೊರಗಿನವರಿಗೆ ಟಿಕೆಟ್ ನೀಡಿರುವುದು ಅಸಮಾಧಾನ ಉಂಟು ಮಾಡಿದೆ. ಹಾಗಾಗಿ, ಮಾರ್ಚ್ 30ರಂದು ಬೆಳಗ್ಗೆ ಪಕ್ಷದ ಕಾರ್ಯಕರ್ತರೊಂದಿಗೆ ಚರ್ಚೆಸುತ್ತೇನೆ.
ಸ್ವಂತಂತ್ರವಾಗಿ ಕಣಕ್ಕಿಳಿಯುವ ಕುರಿತು ನಿರ್ಣಯ ಕೈಗೊಳ್ಳಲಾಗುವುದು ಎಂದು ಮಲ್ಲಿಕಾರ್ಜುನ ಖೂಬಾ ಹೇಳಿದ್ದಾರೆ. ಅಲ್ಲದೆ, ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಸಂದರ್ಭ ಬಿಜೆಪಿ ಟಿಕೆಟ್ ಮಾರಾಟವಾಗಿದೆ ಎಂಬ ಮಾತು ಹೇಳಿದ್ದಾರೆ. ಹೀಗಾಗಿ, ಆ ಬಗ್ಗೆ ಸತ್ಯಾಸತ್ಯತೆ ಗೊತ್ತಾಗಬೇಕು ಎಂದು ಆಗ್ರಹಿಸಿದ್ದಾರೆ.
ಓದಿ : ಬಸವಕಲ್ಯಾಣದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ನಿಶ್ಚಿತ: ಸಚಿವ ಪ್ರಭು ಚವ್ಹಾಣ
ಮಲ್ಲಿಕಾರ್ಜುನ ಖೂಬಾ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವರು ಜೆಡಿಎಸ್ ಪಕ್ಷ ತೊರೆದು ಬಂದು ಬಿಜೆಪಿ ಸೇರಿದವರು. ಈಗ ಅವರಿಗೆ ಟಿಕೆಟ್ ತಪ್ಪಿದಕ್ಕೆ ಈ ರೀತಿ ಮಾತನಾಡಬಾರದು. ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನಿಗೂ ಟಿಕೆಟ್ ಸಿಗುತ್ತೆ ಅನ್ನುವುದಕ್ಕೆ ನಾನೇ ಸಾಕ್ಷಿ. ಹಾಗಾಗಿ, ಟೀಕೆ ಟಿಪ್ಪಣೆ ಮಾಡಬೇಡಿ.
ನಿನ್ನೆಯಷ್ಟೆ ಬಿಜೆಪಿಯ ಕೆಲ ಕಾರ್ಯಕರ್ತರು ಸಭೆ ಮಾಡಿ, ಬಿಜೆಪಿಗೆ ಮತ ಹಾಕುವುದಿಲ್ಲ ಎಂದು ಆಣೆ ಪ್ರಮಾಣ ಮಾಡಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ. ಇದಕ್ಕೆ ಮುಂಬರುವ ದಿನಗಳಲ್ಲಿ ಶರಣು ಸಲಗಾರ ಅವರು ಗೆಲ್ಲುವ ಮೂಲಕ ಉತ್ತರ ನೀಡಲಿದ್ದಾರೆ ಎಂದು ಬಿಜೆಪಿ ಚುನಾವಣಾ ಉಸ್ತುವಾರಿ ಸಂಸದ ಭಗವಂತ ಖೂಬಾ ಹೇಳಿದ್ದಾರೆ.