ಬೀದರ್: ಜಿಲ್ಲೆಯಲ್ಲಿ ಬೇಸಿಗೆ ಆರಂಭದಲ್ಲೇ ಕುಡಿಯಲು ಹನಿ ನೀರಿಗೂ ಹಾಹಾಕಾರ ಉಂಟಾಗಿದೆ. ಮೇವಿಲ್ಲದೆ ಜಾನುವಾರುಗಳ ಪರಿತಪಿಸುತ್ತಿವೆ. ಅಂತರ್ಜಲ ಮಟ್ಟ ಕುಸಿದು ಜಲಕ್ಷಾಮದ ನರಕ ದರ್ಶನವಾಗುತ್ತಿದೆ. ಈಗಲೇ ಹಿಂಗಾದ್ರೆ ಮುಂದೆ ಹೆಂಗೆ ಎಂಬ ಆತಂಕ ಸದ್ಯ ಜನರ ನಿದ್ದೆಗೆಡಿಸಿದೆ.
ಹೌದು, ಬಯಲುಸೀಮೆ ತುತ್ತ ತುದಿಯ ಬೀದರ್ ಜಿಲ್ಲೆ ಸತತ ನಾಲ್ಕು ವರ್ಷಗಳಿಂದ ಮಳೆಯ ಕೊರತೆಯಿಂದ ಬರಗಾಲ ಎದುರಿಸುತ್ತಿದೆ. ಆದ್ರೆ ಈ ಬಾರಿ ಬೇಸಿಗೆ ಆರಂಭದಲ್ಲೇ ಭಯಂಕರ ನೀರಿನ ಸಮಸ್ಯೆ ಜನರನ್ನು ಆತಂಕಕ್ಕೆ ದೂಡಿದೆ. ಅಂತರ್ಜಲ ಮಟ್ಟ ಕುಸಿತ ಕಂಡು ಭೂ ಒಡಲಿನಲ್ಲಿ ನೀರಿಲ್ಲದ್ದಕ್ಕೆ ಹಲವು ಗ್ರಾಮಗಳಲ್ಲಿ ಜಲಕ್ಷಾಮ ಕಾಡ್ತಿದೆ. ಜಿಲ್ಲೆಯ ಔರಾದ್, ಬೀದರ್, ಹುಮನಾಬಾದ್ ಹಾಗೂ ಭಾಲ್ಕಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ನೀರಿಗಾಗಿ ಮಕ್ಕಳಿಂದ ವಯೋವೃದ್ಧರವರೆಗೆ ಹೆಣಗಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಕುಡಿಯಲು ಒಂದು ಬಿಂದಿಗೆ ನೀರು ಸಿಕ್ಕರೆ ಸಾಕು ಎನ್ನುವಷ್ಟು ಅಸಹಾಯಕ ಸ್ಥಿತಿ ಇಲ್ಲಿದೆ.
ಬೇಸಿಗೆ ಆರಂಭದಲ್ಲೇ ಭಯಾನಕ ಸ್ಥಿತಿ ಕುಡಿಯಲು ನೀರಿಗೆ ಪರದಾಟ:
ಮುಂಗಾರು-ಹಿಂಗಾರು ಬೆಳೆಯನ್ನು ಕಳೆದುಕೊಂಡು ಜನರು ಜೇಬಿನಲ್ಲಿ ದುಡ್ಡಿಲ್ಲದೆ ಕೈ ಖಾಲಿ ಮಾಡಿಕೊಂಡು ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿರುವಾಗ ಈ ಬಾರಿಯ ಬೇಸಿಗೆ ಭಯಂಕರ ಅವತಾರ ಎದುರಿಸುವಂತೆ ಮಾಡಿದೆ. ಜೀವ ನದಿ ಮಾಂಜ್ರಾದಲ್ಲಿ ನೀರು ಬತ್ತಿಹೋಗಿ ತಿಂಗಳುಗಳೇ ಆಗಿವೆ. ಶೇ. 80 ರಷ್ಟು ಕೆರೆಗಳು ಕೂಡಾ ಬತ್ತಿಹೋಗಿವೆ. ಬಾವಿಗಳಲ್ಲಿ ನೀರಿಲ್ಲದೆ, ಕೊಳವೆ ಬಾವಿಗಳ ಅಸ್ತಿತ್ವ ಇಲ್ಲದಂತಾಗಿ ಇಷ್ಟು ದಿನ ಕೃಷಿಗೆ ನೀರು ಕೇಳ್ತಿದ್ದ ಜನರು ಈಗ ಕುಡಿಯಲು ನೀರು ಸಿಕ್ಕರೆ ಸಾಕಪ್ಪ ಎನ್ನುತ್ತಿದ್ದಾರೆ.
ಜಿಲ್ಲೆಯ ಬಹುತೇಕ ಗ್ರಾಮೀಣ ಭಾಗದಲ್ಲಿ ದೂರದಿಂದ ನೀರು ತಂದು ಉಪ ಜೀವನ ಮಾಡುತ್ತಿದ್ದಾರೆ. ತಾಂಡ, ವಾಡಿ, ಹಟ್ಟಿಗಳಲ್ಲಂತೂ ನೀರಿನ ಬವಣೆ ತಾರಕಕ್ಕೇರಿದೆ. ನೀರಿಲ್ಲದ್ದಕ್ಕೆ ಜನ ಜೀವನವೇ ಅಸ್ಥವ್ಯಸ್ಥಗೊಂಡಿದೆ.
ಜಾನುವಾರುಗಳ ಅರಣ್ಯರೋದನ:
ಒಂದು ಕಡೆ ನೀರಿಲ್ಲದೆ ಜನರು ಸಂಕಟ ಎದುರಿಸುತ್ತಿದ್ದರೆ, ಮತ್ತೊಂದೆಡೆ ಜಾನುವಾರುಗಳ ಸ್ಥಿತಿ ಹೇಳತೀರದಾಗಿದೆ. ಮೇವಿನ ಕೊರತೆಯಿಂದ ಮೂಕ ಪ್ರಾಣಿಗಳು ಮಾರಾಟವಾಗ್ತಿವೆ. ಜನರಿಗೆ ಕುಡಿಯಲು ನೀರು ಸಿಗ್ತಿಲ್ಲ, ಇನ್ನು ಜಾನುವಾರಗಳ ವ್ಯಥೆಯನ್ನು ಯೋಚನೆ ಮಾಡುವವರೇ ಇಲ್ಲದಂತಾಗಿದೆ. ಮೇವಿನ ಕೊರತೆ ಮಾರ್ಚ್ ತಿಂಗಳಲ್ಲೇ ಎದುರಾಗಿದ್ದು, ಸುಡು ಬಿಸಿಲಿನ ತಾಪಕ್ಕೆ ಜಾನುವಾರುಗಳು ಬೆಂದು ಹೋಗಿವೆ.
ಬೇಸಿಗೆ ಆರಂಭದಲ್ಲೇ ಭಯಾನಕ ಸ್ಥಿತಿ ಮೇವಿನ ಶೇಖರಣೆ ಎಲ್ಲಿದೆ..?
ಈಗಾಗಲೇ ಬರಪೀಡಿತ ಪ್ರದೇಶಗಳಲ್ಲಿ ಮೇವಿನ ಶೇಖರಣೆ ಇದೆ ಎಂದು ಹೇಳುವ ಸರ್ಕಾರ ಜಿಲ್ಲೆಯಲ್ಲಿ ಮೇವು ಕೇಂದ್ರ ಸ್ಥಾಪನೆ ಮಾಡಿಲ್ಲ. ಕೆಲವೊಂದು ರೈತರನ್ನು ಬಿಟ್ಟರೆ ಬಿದಾಡಿ ಜಾನುವಾರು, ಮಧ್ಯಮ ಹಾಗೂ ಸಣ್ಣ ರೈತರ ಜಾನುವಾರುಗಳು ನೀರು ಮತ್ತು ಮೇವಿನ ಅಭಾವಕ್ಕೆ ಸಿಲುಕಿ ಒದ್ದಾಡುತ್ತಿವೆ.
ಸಾಕಷ್ಟು ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಮೂರು ದಿನಕ್ಕೊಮ್ಮೆ ಸಂಗ್ರಹ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಕಾರಂಜಾ ಜಲಾಶಯದ ನೀರು ಸರಬರಾಜಾಗುವ ಹುಮನಾಬಾದ್, ಭಾಲ್ಕಿ ಹಾಗೂ ಬೀದರ್ ನಗರ ಪ್ರದೇಶದಲ್ಲಿ ಕೊಂಚ ಮಟ್ಟಿಗೆ ನೀರಿನ ಸಮಸ್ಯೆ ಸುಧಾರಣೆ ಕಂಡರೂ ಗ್ರಾಮೀಣ ಭಾಗದ ಜನರ ಗೋಳು ಕೇಳಲು ಅಧಿಕಾರಿಗಳು ಬರುತ್ತಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಕೆರೆಗಳ ಹೂಳೆತ್ತುವ ಹಾಗೂ ಕೆಲವೊಂದು ಕಡೆ ಹೊಸ ಬೋರ್ವೆಲ್ ಅಳವಡಿಸಿರುವುದನ್ನು ಬಿಟ್ಟರೆ, ಬರ ಪರಿಹಾರ ನಿರ್ವಹಣೆ ಕೆಲಸ ಕಂಡು ಬಂದಿಲ್ಲ. ಜನರಿಗೆ ಮೂಲಭೂತವಾಗಿ ಇಂತಹ ಭಯಾನಕ ಬಿಸಿಲಿನ ತಾಪದಲ್ಲಿ ನೀರು ಸರಬರಾಜು ಮಾಡುವ ಕೆಲಸವನ್ನು ಸರ್ಕಾರ ಮಾಡುವುದು ಮರೆತು ಬಿಟ್ಟಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಬೇಸಿಗೆ ಜೋರಾಗ್ತಿದ್ದಂತೆ ಅದೆಂತಹ ಜಲಕ್ಷಾಮ ಎದುರಾಗಲಿದೆ ಎಂಬುದನ್ನು ಯೋಚಿಸಿಯೇ ಜನ ಕಂಗಾಲಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಉಲ್ಬಣಗೊಂಡ ನೀರಿನ ಬವಣೆ ನೀಗಿಸುವ ಕೆಲಸಕ್ಕೆ ಅಧಿಕಾರಿಗಳು ಮುಂದಾದ್ರೆ ಈ ಬಾರಿಯ ಬರಗಾಲವನ್ನು ಸಮರ್ಥವಾಗಿ ಎದುರಿಸಬಹುದು.