ಬಸವಕಲ್ಯಾಣ : ನಿಯಂತ್ರಣಕ್ಕೆ ಬಾರದ ಶಂಕಿತ ಡೆಂಘೀ ಪ್ರಕರಣಗಳು, ಆಸ್ಪತ್ರೆಗೆ ಸುತ್ತಾಡುತ್ತಿರುವ ಶಂಕಿತ ಡೆಂಘೀ ಬಾಧಿತರು, ನಿರೀಕ್ಷಿತ ಮಟ್ಟದಲ್ಲಿ ನಡೆಯದ ಜಾಗೃತಿ ಅಭಿಯಾನ, ಸೊಳ್ಳೆ ಕಾಟಕ್ಕೆ ದೊರಕದ ಮುಕ್ತಿ. ಇದು ಶಂಕಿತ ಡೆಂಘೀಯಿಂದ ನಲುಗುತ್ತಿರುವ ಬಸವಕಲ್ಯಾಣ ನಾಗರಿಕರ ಗೋಳಾಟ.
ಕಳೆದ ಕೆಲ ವಾರಗಳಿಂದ ಪತ್ತೆಯಾಗುತ್ತಿರುವ ಶಂಕಿತ ಡೆಂಘೀ ಪ್ರಕರಣಗಳು ಕಡೆಮೆಯಾಗುವ ಲಕ್ಷಣಗಳು ಕಂಡುಬರುತ್ತಿಲ್ಲ. ಮಕ್ಕಳು, ಮಹಿಳೆಯರು ಸೇರಿ ನೂರಾರು ಜನ ಶಂಕಿತ ಡೆಂಘೀಗೆ ತುತ್ತಾಗಿ ಆಸ್ಪತ್ರೆಯಿಂದ ಆಸ್ಪತ್ರೆಗಳಿಗೆ ಓಡಾಡುವದು ಮಾತ್ರ ತಪ್ಪುತ್ತಿಲ್ಲ. ಆದರೆ, ಡೆಂಘೀ ನಿಯಂತ್ರಣಕ್ಕೆ ಮುಂದಾಗಬೇಕಿದ್ದ ಸ್ಥಳೀಯ ಆಡಳಿತ ಮಾತ್ರ ಕಾಟಾಚಾರಕ್ಕೆ ಎಂಬಂತೆ ಅಲಲ್ಲಿ ಸ್ವಚ್ಛತೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವದು ಬಿಟ್ಟರೆ, ಅರಿವು ಮೂಡಿಸುವ ಕೆಲಸ ನಡೆಯುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ.
ಜ್ವರ ಕಾಣಿಸಿಕೊಂಡ ಜನರು ನಗರದ ಸರ್ಕಾರಿ ಆಸ್ಪತ್ರೆಗೆ ಹೋದರೆ ಅಲ್ಲಿ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಶಂಕಿತ ಡೆಂಘೀ ಜ್ವರ ಪತ್ತೆಗಾಗಿ ಹಾಗೂ ಡೆಂಘೀ ಪತ್ತೆ ಕಿಟ್‌ಗಳು ಇಲ್ಲ ಹಾಗೂ ಪ್ಲೇಟ್‌ಲೇಟ್ ಕೌಂಟ್ ಮಾಡುವ ಶಲ್ ಕೌಂಟರ್ ಯಂತ್ರವು ಇಲ್ಲ. ರಕ್ತ ಪರೀಕ್ಷೆಗಾಗಿ ಖಾಸಗಿ ಆಸ್ಪತ್ರೆ ಹೋಗಿ ಸಾವಿರಕ್ಕೂ ಅಧಿಕ ರೂ. ಖರ್ಚು ಮಾಡಬೇಕಾಗುತ್ತಿದೆ. ಅಷ್ಟೊಂದು ಹಣ ಎಲ್ಲಿಂದ ತರಬೇಕು ಎಂದು ಜನರ ಪ್ರಶ್ನೆಯಾಗಿದೆ.