ಬಸವಕಲ್ಯಾಣ: ಕೆಲವೇ ದಿನಗಳಲ್ಲಿ ನಡೆಯಲಿರುವ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಆಡಳಿತರೂಢ ಪಕ್ಷ ಬಿಜೆಪಿಯಲ್ಲಿ ಆಕಾಂಕ್ಷಿಗಳ ಮಧ್ಯೆ ಪೈಪೋಟಿ ಏರ್ಪಟ್ಟು ಟಿಕೆಟ್‌ಗಾಗಿ ಬಲ ಪ್ರದರ್ಶನ ನಡೆಸುತ್ತಿರುವುದು ಒಂದಡೆಯಾದರೆ, ಸ್ಥಳೀಯ ಆಕಾಂಕ್ಷಿಗಳು ಒಗ್ಗಟ್ಟು ಪ್ರದರ್ಶನ ಮಾಡಿರುವುದು ಇನ್ನೊಂದೆಡೆ ಕಂಡು ಬಂತು.
ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಆಗಮನದ ಹಿನ್ನೆಲೆ ಬೆಳಗ್ಗೆ ನಗರದ ಬಿಜೆಪಿ ಹಿರಿಯ ಮುಖಂಡ ಸಂಜಯ ಪಟವಾರಿ ನಿವಾಸದಲ್ಲಿ ಸಭೆ ನಡೆಸಿದ ಸ್ಥಳೀಯ ಆಕಾಂಕ್ಷಿಗಳು, ಪರಸ್ಪರ ಪ್ರತಿಷ್ಠೆ ಬದಿಗಿಟ್ಟು ಎಲ್ಲರೂ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಸ್ಥಳೀಯರನ್ನು ಕಡೆಗಣಿಸಿ, ಹೊರಗಿನವರಿಗೆ ಅವಕಾಶ ಸಿಗಲು ಬಿಡಲ್ಲ ಎನ್ನುವ ಸಂದೇಶ ಸಾರುವಲ್ಲಿ ಯಶಸ್ವಿಯಾಗಿದ್ದಾರೆ.
ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಮುಖಂಡರಾದ ಸಂಜಯ ಪಟವಾರಿ, ಗುಂಡುರೆಡ್ಡಿ, ಪ್ರದೀಪ ವಾತಡೆ, ಅನೀಲ ಭುಸಾರೆ, ಉಮೇಶ ಬಿರಬಿಟ್ಟೆ, ವಿಜಯ ಕುಮಾರ ಮಂಠಾಳೆ ಕೈಜೋಡಿಸಿ ಒಗ್ಗಟ್ಟು ಪ್ರದರ್ಸಿಸಿದರು. ನಮ್ಮಲ್ಲಿ ಯಾವುದೇ ಗುಂಪುಗಾರಿಕೆ ಹಾಗೂ ಬಿನ್ನಮತ ಇಲ್ಲ. ನಾವೆಲ್ಲರು ಒಂದೇ ಆಗಿದ್ದೇವೆ. ಸ್ಥಳೀಯರ ಪೈಕಿ ಯಾರಿಗೆ ಟಿಕೆಟ್ ಸಿಕ್ಕರೂ ನಾವೆಲ್ಲ ಕೂಡಿ ಪಕ್ಷ ಗುರುತಿಸಿದ ಅಭ್ಯರ್ಥಿಯನ್ನು ಗೆಲ್ಲಿಸಿಕೊಡುತ್ತೇವೆ ಎಂದು ತಿಳಿಸಿದರು.
ಉಪಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿಯಲು ಸುಮಾರು 12ಕ್ಕೂ ಅಧಿಕ ಸ್ಥಳೀಯ ಆಕಾಂಕ್ಷಿಗಳು ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿರುವುದು ಒಂದೆಡೆಯಾದರೆ, ಹೊರ ತಾಲೂಕು ಮತ್ತು ನೆರೆ ಜಿಲ್ಲೆಗಳಿಂದ ಇಲ್ಲಿಗೆ ಬಂದು ಟಿಕೆಟ್ ಕೇಳುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹೀಗಾಗಿ ನಮ್ಮಲ್ಲಿಯ ಒಡಕಿನ ಲಾಭ ಪಡೆದು ಹೊರಗಿನಿಂದ ಬಂದವರಿಗೆ ಟಿಕೆಟ್ ನೀಡಿದರೆ ಹೇಗೆ?. ಇದರಿಂದ ಪಕ್ಷದ ಸ್ಥಳೀಯರು ಅವಕಾಶದಿಂದ ವಂಚನೆಗೆ ಒಳಗಾಗಬೇಕಾಗುತ್ತದೆ ಎನ್ನುವ ಕಾರಣ ಎಲ್ಲರು ಕೂಡಿ ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎನ್ನುವ ಬೇಡಿಕೆಯನ್ನು ಪಕ್ಷದ ವರಿಷ್ಠರ ಮುಂದಿಡಲು ನಿರ್ಧರಿಸಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.