ಬಸವಕಲ್ಯಾಣ: ಒಳ ಮೀಸಲಾತಿ ಸಂಬಂಧ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದಿಂದ ಮಂಡಿಸಲಾದ ವರದಿಯನ್ನು ತಕ್ಷಣ ಜಾರಿಗೆ ತರಬೇಕು. ನಿರ್ಲಕ್ಷ್ಯ ವಹಿಸಿದಲ್ಲಿ ಆಳುವ ಪಕ್ಷದ ವಿರುದ್ಧ ಹೋರಾಟ ತೀವ್ರಗೊಳಿಸಿ ಉಪ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಎ.ಜೆ ಸದಾಶಿವ ಆಯೋಗದ ವರದಿ ಜಾರಿ ಹೋರಾಟ ಸಮನ್ವಯ ಸಮಿತಿ ಎಚ್ಚರಿಸಿತು.
ನಗರದ ಯಾತ್ರಿ ನಿವಾಸದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಪ್ರಮುಖರು, ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕಾಗಿ ಅನೇಕ ವರ್ಷಗಳಿಂದಲೂ ಹೋರಾಟ ಮಾಡಿದರೂ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸರ್ಕಾರಗಳು ಇದುವರೆಗೆ ನಮ್ಮ ಮನವಿಗೆ ಸ್ಪಂದಿಸಿಲ್ಲ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳುವ ಮೂಲಕ ವರದಿ ಜಾರಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸಮನ್ವಯ ಸಮಿತಿಯ ರಾಜ್ಯಾಧ್ಯಕ್ಷ ಮುತ್ತಣ್ಣ ವೈ.ಬೆಣ್ಣೂರ ಮಾತನಾಡಿ, ದಲಿತರಿಗೆ ಜನ ಸಂಖ್ಯೆಗೆ ಅನುಗುಣವಾಗಿ ನ್ಯಾಯ ಕಲ್ಪಿಸುವ ಸಂಬಂಧ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೊಳಿಸುವಲ್ಲಿ ಯಾವುದೇ ಪಕ್ಷಗಳು ಆಸಕ್ತಿ ತೋರಿಸಿಲ್ಲ. ಚುನಾವಣೆ ಬಂದಾಗ ಮಾತ್ರ ನಮ್ಮ ಸಮಾಜದ ಬೇಡಿಕೆಗೆ ಸ್ಪಂದಿಸಲಾಗುವುದು ಎಂಬ ಭರವಸೆ ನೀಡುತ್ತಾರೆ. ಆದರೆ, ಚುನಾವಣೆಗಳು ಮುಗಿದ ಮೇಲೆ ವರದಿ ಜಾರಿಗೆ ಮುಂದಾಗುತ್ತಿಲ್ಲ. ಬಿಜೆಪಿ ಸರ್ಕಾರದಲ್ಲಿ ಜಾರಿಗೆ ತರಲಾಗುತ್ತಿದೆ ಎನ್ನುವ ಆಶಾಭಾವನೆ ಹೊಂದಲಾಗಿದೆ. ಬಿಜೆಪಿ ಸರ್ಕಾರ ವರದಿ ಜಾರಿಗೆ ತಂದರೆ ನಮ್ಮ ಸಮಾಜ ಎಂದೆಂದಿಗೂ ಬಿಜೆಪಿಯ ಜೊತೆಗಿರುತ್ತದೆ ಎಂದರು.