ಬಸವಕಲ್ಯಾಣ:ಲಿಂಗಾಯತ ಧರ್ಮ ಮಾನ್ಯತೆಗಾಗಿ ನಡೆಯುತ್ತಿರುವ ಹೋರಾಟ ಗುಪ್ತವಾಗಿಲ್ಲ. ಮುಕ್ತವಾಗಿಯೇ ನಡೆಯುತ್ತಿದೆ. ಸ್ವತಂತ್ರ ಧರ್ಮದ ಮಾನ್ಯತೆ ಸಿಗುವವರೆಗೂ ಹೋರಾಟ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಇದರಲ್ಲಿ ಹೆದರಿಕೆಯೂ ಇಲ್ಲ ಎಂದು ಹೋರಾಟದ ವಿರುದ್ಧ ಷಡ್ಯಂತ್ರ ರೂಪಿಸಲು ಮುಂದಾದವರಿಗೆ ಮಾಜಿ ಸಚಿವ ಎಂ ಬಿ ಪಾಟೀಲ್ ಟಾಂಗ್ ನೀಡಿದ್ದಾರೆ.
ನಗರದ ಬಸವ ಮಹಾಮನೆ ಪರಿಸರದಲ್ಲಿ ನಡೆಯುತ್ತಿರುವ 18ನೇ ಕಲ್ಯಾಣ ಪರ್ವದ 2ನೇ ದಿನದ ಧರ್ಮ ಚಿಂತನಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮ ಮಾನ್ಯತೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ಎಲ್ಲರೂ ಪಕ್ಷಾತೀತವಾಗಿ ಕೈಜೋಡಿಸಬೇಕು. ಇದು 12ನೇ ಶತಮಾನದಲ್ಲಿಯೇ ಹುಟ್ಟಿದ ಧರ್ಮ. ಸಿಖ್, ಜೈನ್ ಧರ್ಮಗಳಿಗೆ ಪ್ರತ್ಯೇಕ ಧರ್ಮ ಎಂದು ಮಾನ್ಯತೆ ನೀಡಲಾಗಿದೆ. ಆದರೆ, ಲಿಂಗಾಯತರಿಗೆ ಮಾತ್ರ ಯಾಕೆ ಅನ್ಯಾಯ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದರು.
ಪ್ರತ್ಯೇಕ ಧರ್ಮ ಮಾನ್ಯತೆಗಾಗಿ ನಡೆದ ಹೋರಾಟಕ್ಕೆ ರಾಜಕೀಯ ಬಣ್ಣ ಬಳಿದು ನಮ್ಮ ವಿರುದ್ಧ ಷಡ್ಯಂತ್ರ ರೂಪಿಸಲಾಯಿತು. ಈ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ವಿಫಲರಾಗಿದ್ದೇವೆ. ಆದರೆ, ವಿರೋಧಿಗಳು ಚುನಾವಣೆ ಪೂರ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಮ್ಮ ವಿರುದ್ಧ ಷಡ್ಯಂತರ ರೂಪಿಸಿ ಧರ್ಮ ಒಡೆಯುತಿದ್ದೇವೆ ಎನ್ನುವ ಆರೋಪ ಹೊರಿಸಿ ಗೊಂದಲ ಸೃಷ್ಟಿಸಿದರು ಎಂದು ವಾಗ್ದಾಳಿ ನಡೆಸಿದರು.
ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪಿಸಿದ್ದು ನಾವಲ್ಲ. ಪ್ರತ್ಯೇಕ ಧರ್ಮ ಮಾನ್ಯತೆಗಾಗಿ ಪ್ರಥಮವಾಗಿ ಬೀದರ್ನಲ್ಲಿ ನಡೆದ ರ‌್ಯಾಲಿ ಹಾಗೂ ಬೆಳಗಾವಿಯಲ್ಲಿ ನಡೆದ ರ‌್ಯಾಲಿಯಲ್ಲಿ ನಾನಾಗಲಿ, ವಿನಯ್ ಕುಲಕರ್ಣಿಯಾಗಲಿ ಅಥವಾ ಬಸವರಾಜ ಹೊರಟ್ಟಿ ಅವರಾಗಲಿ ಯಾರೂ ಭಾಗವಹಿಸಿರಲಿಲ್ಲ. ಕಲಬುರಗಿಯಿಂದ ಹಿಡಿದು ಮುಂದೆ ನಡೆದ ರ‌್ಯಾಲಿಗಳಲ್ಲಿ ನಾವೆಲ್ಲ ಭಾಗವಹಿಸಿದ್ದೇವೆ. ಏನೇ ಷಡ್ಯಂತರ ನಡೆಸಿದರೂ ಅದಕ್ಕೆ ಬಗ್ಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮುಗಿದ ಅಧ್ಯಾಯ: ಲಿಂಗೈಕ್ಯ ಮಾತೆ ಮಹಾದೇವಿ ಅವರು ಗುರು ಬಸವಣ್ಣನವರ ವಚನಾಂಕಿತ ತಿರುಚಿದ್ದಾರೆ ಎಂದು ಆರೋಪಿಸಿ ಹೋರಾಟಕ್ಕೆ ವಿರೋಧಿಸುವದನ್ನು ಇಲ್ಲಿಗೆ ನಿಲ್ಲಿಸಬೇಕು. ನಿಮ್ಮಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದ ಎಂ ಬಿ ಪಾಟೀಲ, ಪ್ರತ್ಯೇಕ ಧರ್ಮ ಮಾನ್ಯತೆಗಾಗಿ ಎಲ್ಲರೂ ಒಗ್ಗೂಡಿ ಹೋರಾಟ ಮಾಡಬೇಕು ಎಂದು ಮನವಿ ಮಾಡಿದರು.
ವಚನಾಂಕಿತ ತಿದ್ದಿದ್ದು ಸರಿನೋ, ತಪ್ಪೋ ಅನ್ನುವುದು ಚರ್ಚೆ ಬೇಡ. ಹಿಂದೆ ಕಲಬುರಗಿಯಲ್ಲಿ ನಡೆದ ರ‌್ಯಾಲಿ ವೇಳೆ ತಾವು ಮಾಡಿದ ಮನವಿಗೆ ಸ್ಪಂದಿಸಿದ ಮಾತೆ ಮಹಾದೇವಿ ಅವರು, ಅದನ್ನ ಹಿಂಪಡೆಯುತ್ತೇನೆ ಎಂದು ಘೋಷಿಸಿದ್ದಾರೆ. ಅಲ್ಲಿಗೆ ಅದಿನ್ನುಮುಗಿದ ಅಧ್ಯಾಯ. ಅದರ ಬಗ್ಗೆ ಮತ್ತೆ ಮತ್ತೆ ಚರ್ಚೆಗಳು ಬೇಡ ಎಂದು ಕೇಳಿಕೊಂಡರು.