ಬೀದರ್:ಸಕಾಲಕ್ಕೆ ಮಳೆಯಾಗಿ ಹಚ್ಚ ಹಸಿರಿನಿಂದ ಕಂಗೊಳಿಸುವ ಮುಂಗಾರು ಹಂಗಾಮಿನ ಬೆಳೆಗಳಿಗೆ ಜಿಂಕೆಗಳು ಕಾಟ ಕೊಡುತ್ತಿವೆ.
ಜಿಲ್ಲೆಯ ಭಾಲ್ಕಿ ತಾಲೂಕಿನ ಹಲಬರ್ಗಾ, ಮಮದಾಪೂರ್, ಉಡಬಾಳ, ನಿಟ್ಟೂರ್, ಕಮಲನಗರ ತಾಲೂಕಿನ ಡೊಣಗಾಂವ್, ಬೆಳಕೊಣಿ, ದಾಬಕಾ, ಮುರ್ಕಿ, ಹುಲ್ಯಾಳ, ಔರಾದ್ ತಾಲೂಕಿನ ಚಟನಳ್ಳಿ, ಜಿರ್ಗಾ, ಜೋಜನಾ, ಕಪ್ಪಿಕೇರಿ ಸೇರಿದಂತೆ ಬಹುತೇಕ ಭಾಗಗಳಲ್ಲಿ ಜಿಂಕೆಗಳ ಹಿಂಡು ಅನ್ನದಾತನ ನಿದ್ದೆಗೆಡಿಸಿವೆ.
ಜಿಲ್ಲೆಯಲ್ಲಿ ಕಾದಿಟ್ಟ ಅರಣ್ಯ ಪ್ರದೇಶದ ಕೊರತೆಯಿಂದಾಗಿ ಆಹಾರ ಅರಸಿ ಬರುವ ಜಿಂಕೆಗಳ ಹಿಂಡು ಸಾಮೂಹಿಕವಾಗಿ ರೈತರ ಗದ್ದೆಗಳಲ್ಲಿ ಓಡಾಡುವುದಲ್ಲದೆ, ಚಿಗುರು ಸಸಿಗಳನ್ನು ತಿನ್ನುತ್ತಿವೆ. ಇದರ ಪರಿಣಾಮ ಕಷ್ಟಪಟ್ಟು ಬೆಳೆ ಬೆಳೆದ ರೈತ ಸಂಕಷ್ಟಕ್ಕೀಡಾಗಿದ್ದಾನೆ.