ಬೀದರ್: ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳು ಅಲ್ಲ, ಮಿತ್ರರೂ ಅಲ್ಲ ಎಂಬ ಮಾತು ಅಕ್ಷರಶಃ ಸತ್ಯ ಎನ್ನುವಂತಾಗಿದೆ. ಬೀದರ್ನಲ್ಲಿ ಪರಿಷತ್ ಚುನಾವಣೆ ಕಾವು ರಂಗೇರಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ವಿಶೇಷ ಅಂದ್ರೆ ಇಲ್ಲಿನ ಇಬ್ಬರು ಅಭ್ಯರ್ಥಿಗಳು ಬೀಗರು (ಸಂಬಂಧಿಕರು) ಆಗಿದ್ದಾರೆ.
ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಖಂಡ್ರೆಗೆ ಇದು ಅಸ್ತಿತ್ವದ ಚುನಾವಣೆಯಾದ್ರೆ, ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ್‌ಗೆ ರಾಜಕೀಯ ಕ್ಷೇತ್ರದಲ್ಲಿ ಮೊದಲ ಚುನಾವಣೆಯಾಗಿದೆ. ಪರಿಷತ್ ಚುನಾವಣೆ ಗೆಲ್ಲಲೇಬೇಕೆಂದು ಇಬ್ಬರು ಅಭ್ಯರ್ಥಿಗಳು ಪಣ ತೊಟ್ಟಿದ್ದಾರೆ. ಬೀದರ್ ಮತ ಕ್ಷೇತ್ರದಲ್ಲಿ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರಿದೆ.
ಪ್ರಕಾಶ್ ಖಂಡ್ರೆ ಬೀದರ್ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಹಿರಿಯ ಮುಖಂಡ ಹಾಗೂ ಭಾಲ್ಕಿ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿ, ಎರಡು ಬಾರಿ ಸೋಲಿನ ಕಹಿ ಕಂಡಿದ್ದಾರೆ. ಮೂರನೇ ಬಾರಿ ಅಂದ್ರೆ 2018ರ ವಿಧಾನಸಭೆ ಚುನಾವಣೆ ವೇಳೆ ಕೊನೆ ಕ್ಷಣದಲ್ಲಿ ಟಿಕೆಟ್ ಕೈತಪ್ಪಿದ್ದಕ್ಕೆ ಕಮಲ ತೊರೆದು ಜೆಡಿಎಸ್‌ನಿಂದ ಸೋಲಿನ ಕಹಿ ಕಂಡಿದ್ರು.
ಇದರಿಂದ ಅನಾರೋಗ್ಯಕ್ಕೂ ತುತ್ತಾಗಿ ಸಾವಿನ ದವಡೆಯಿಂದ ಪಾರಾಗಿ ಇತ್ತೀಚಿಗೆ ಮತ್ತೆ ಬಿಜೆಪಿ ಪಕ್ಷಕ್ಕೆ ವಾಪಸ್ಸಾದ ಇವರಿಗೆ ಈಗ ಬಿಜೆಪಿ ಪರಿಷತ್ ಚುನಾವಣೆಗೆ ಅವಕಾಶ ನೀಡುವ ಮೂಲಕ ರಾಜಕೀಯ ಮರುಜನ್ಮ ನೀಡಿದೆ. ಆದರೆ, ಇವರ ಎದುರಾಳಿಯಾಗಿ ಬೀಗರೆ ಆಗಿರುವ ಭೀಮರಾವ್ ಪಾಟೀಲ್ ಕಣಕ್ಕಿಳಿಯುವ ಮೂಲಕ ಜಂಗೀ ಕುಸ್ತಿಗೆ ರೆಡಿಯಾಗಿದ್ದಾರೆ.