ಬೀದರ್: ಜಿಲ್ಲೆಯಲ್ಲಿಂದು ಹಾವು ಕಡಿದು ಸಾವನಪ್ಪಿದ್ದ ವ್ಯಕ್ತಿ ಸೇರಿ 9 ಮಂದಿ ಕೊರೊನಾಗೆ ಬಲಿಯಾಗಿದ್ದು, ಮೃತರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ.
ಚಿಟಗುಪ್ಪ ತಾಲೂಕಿನ ಮುದ್ನಾಳ ಗ್ರಾಮದ 45 ವರ್ಷದ ವ್ಯಕ್ತಿಗೆ ಜೂನ್ 24 ರಂದು ಹಾವು ಕಡಿದು ಸಾವನಪ್ಪಿದ್ದರು. ಇನ್ನು, ಬಸವಕಲ್ಯಾಣ ನಗರದ 32 ವರ್ಷದ 9 ತಿಂಗಳ ತುಂಬು ಗರ್ಭಿಣಿಗೆ ರಕ್ತದೊತ್ತಡ ಜಾಸ್ತಿಯಾದ ಕಾರಣ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಜೂನ್ 28ರಂದು ಬ್ರೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದರು. ಆದರೆ, ಜುಲೈ 2 ರಂದು ಚಿಕಿತ್ಸೆ ಫಲಕಾರಿಯಾಗದೆ ಗರ್ಭಿಣಿ ಮಹಿಳೆ ಸಾವನ್ನಪ್ಪಿದ್ದಳು. ಈ ಇಬ್ಬರ ಗಂಟಲು ದ್ರವದ ಮಾದರಿ ಪರೀಕ್ಷೆ ನಡೆಸಿದ್ದು, ಕೊವಿಡ್-19 ಸೋಂಕು ಪತ್ತೆಯಾಗಿದೆ.
ಬೀದರ್ ನಗರದ ಓಲ್ಡ್ ಸಿಟಿಯ ಮುಲ್ತಾನಿ ಕಾಲೋನಿಯ 70 ವರ್ಷದ ವ್ಯಕ್ತಿ ಜೂನ್ 28 ರಂದು ಮನೆಯಲ್ಲೇ ಸಾವನ್ನಪ್ಪಿದ್ದು, ಅವರ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಿದಾಗ ಪಾಸಿಟಿವ್ ಬಂದಿದೆ. ಅಮಲಾಪೂರ್ ಗ್ರಾಮದ 25 ವರ್ಷದ ಯುವತಿ ಜ್ವರ, ಕೆಮ್ಮು, ಉಸಿರಾಟದ ತೊಂದರೆಯಿಂದಾಗಿ ಜೂನ್ 24 ರಂದು ಬ್ರೀಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಜೂನ್ 25ರಂದು ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದು, ಆಕೆಯಲ್ಲೂ ಸೋಂಕು ದೃಢಪಟ್ಟಿದೆ. ಬೀದರ್ ನಗರದ ಓಲ್ಡ್ ಸಿಟಿ ಚೌಬಾರಾ ಬಡಾವಣೆಯ 65 ವರ್ಷದ ವ್ಯಕ್ತಿ ಜ್ವರ ಹಾಗೂ ಉಸಿರಾಟದ ತೊಂದರೆಯಿಂದಾಗಿ ಜೂನ್ 27ರಂದು ಬ್ರೀಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಜುಲೈ 2ರಂದು ಸೋಂಕು ದೃಢಪಟ್ಟಿದ್ದು, ಜುಲೈ 3ರಂದು ಸಾವನಪ್ಪಿದ್ದಾರೆ.
ಬಸವಕಲ್ಯಾಣ ನಗರದ ಕಿಲಾಗಲ್ಲಿಯ 60 ವರ್ಷದ ವೃದ್ಧೆ ರಕ್ತದೊತ್ತಡ, ಮಧುಮೇಹ, ಜ್ವರ ಹಾಗೂ ಹೃದಯರೋಗ ಸಮಸ್ಯೆಯಿಂದಾಗಿ ಜೂನ್ 27ರಂದು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಈಕೆಯೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದು, ಮೃತರಲ್ಲಿ ಸೋಂಕು ಇರುವುದಾಗಿ ಖಚಿತವಾಗಿದೆ. ಬೀದರ್ ತಾಲೂಕಿನ ಬಗದಲ ಗ್ರಾಮದ 43 ವರ್ಷದ ವ್ಯಕ್ತಿ ಉಸಿರಾಟದ ತೊಂದರೆಯಿಂದಾಗಿ ಜೂನ್ 30ರಂದು ಬ್ರೀಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇವರು ಜುಲೈ 1ರಂದು ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದು, ಇವರಲ್ಲಿ ಸೋಂಕು ಇರುವುದು ಖಚಿತವಾಗಿದೆ.
ಇನ್ನು, ಭಾಲ್ಕಿ ಪಟ್ಟಣದ ಅಶೋಕನಗರ ಬಡಾವಣೆಯ 63 ವರ್ಷದ ವೃದ್ಧ ರಕ್ತದೊತ್ತಡ, ಮಧುಮೇಹ ಹಾಗೂ ಪಾರ್ಶ್ವವಾಯುನಿಂದಾಗಿ ಜೂನ್ 29ರಂದು ಬ್ರೀಮ್ಸ್ ಆಸ್ಪತ್ರೆಗೆ ದಾಖಲಾಗಿ, ಜೂನ್ 30ರಂದು ಮೃತಪಟ್ಟಿದ್ದಾರೆ. ಇವರಲ್ಲೂ ಸೋಂಕು ಪತ್ತೆಯಾಗಿದೆ. ತೆಲಂಗಾಣದ ಜಹಿರಾಬಾದ್ ಜಿಲ್ಲೆಯ ಸಂಗಾರೆಡ್ಡಿಯ 63 ವರ್ಷದ ವೃದ್ಧ ರಕ್ತದೊತ್ತಡ, ಮಧುಮೇಹ ಹಾಗೂ ಉಸಿರಾಟದ ತೊಂದರೆಯಿಂದಾಗಿ ಜೂನ್ 29ರಂದು ಬ್ರೀಮ್ಸ್ ಆಸ್ಪತ್ರೆಗೆ ದಾಖಲಾಗಿ, ಜೂನ್ 30ರಂದು ಸಾವನಪ್ಪಿದ್ದಾರೆ. ಇವರಲ್ಲಿಯೂ ಕೂಡ ಸೋಂಕು ಪತ್ತೆಯಾಗಿದೆ.