ಬೀದರ್:ಸಂಸದ ಭಗವಂತ ಖೂಬಾ ಅವರಲ್ಲಿ ಕೊವಿಡ್-19 ದೃಢವಾಗಿದ್ದು, ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದ ಹಲವು ನಾಯಕರಿಗೆ ಇದೀಗ ಕೊರೊನಾ ಭೀತಿ ಶುರುವಾಗಿದೆ.
ಸಂಸದರಿಗೆ ಯಾವುದೇ ರೋಗ ಲಕ್ಷಣ ಕಂಡು ಬಂದಿಲ್ಲವಾದರೂ ಗಂಟಲು ದ್ರವ ಪರಿಕ್ಷೆಯಲ್ಲಿ ಕೊವಿಡ್-19 ಸೋಂಕು ದೃಢವಾಗಿದೆ. ದೆಹಲಿ, ಬೆಂಗಳೂರು ಹಾಗೂ ಜಿಲ್ಲೆಯಾದ್ಯಂತ ಪ್ರಯಾಣ ಮಾಡಿದ ಹಿನ್ನೆಲೆಯಲ್ಲಿ ಸೋಂಕು ತಗುಲಿರುವ ಸಾಧ್ಯತೆ ಇದೆ. ನಗರದ ಶಿವನಗರದ ಅವರ ಮನೆಯಲ್ಲಿ ಪ್ರತ್ಯೇಕವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಸಂಸದರ ಕುಟುಂಬದ ಎಲ್ಲಾ ಸದಸ್ಯರು, ಗನ್ ಮೆನ್, ಆಪ್ತ ಸಹಾಯಕರು ಹಾಗೂ ಚಾಲಕರು ಸೇರಿದಂತೆ ಎಲ್ಲರೂ ಕೋವಿಡ್ ಟೆಸ್ಟ್ಗೆ ಗಂಟಲು ದ್ರವ ನೀಡಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಆರಂಭವಾದಾಗಿನಿಂದ ಸಂಸದ ಭಗವಂತ ಖೂಬಾ ಸಾಕಷ್ಟು ಭಾಗಗಗಳಲ್ಲಿ ಸುತ್ತಾಡಿ ಜನರ ನೋವನ್ನು ಆಲಿಸಿದ್ದಾರೆ. ಈ ವೇಳೆ ಅಧಿಕಾರಿಗಳು, ಶಾಸಕರು, ಸಚಿವರು ಸೇರಿದಂತೆ ಹಲವು ಜನರಿಗೆ ನೇರವಾಗಿ ಸಂಪರ್ಕಕ್ಕೆ ಬಂದ ಹಿನ್ನೆಲೆಯಲ್ಲಿ ಸಂಸದರ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚಲಾಗುತ್ತಿದೆ.
ಚಿಟಗುಪ್ಪ ಪಿಎಸ್ಐ ಸೇರಿ ನಾಲ್ವರು ಪೊಲೀಸರಿಗೆ ಸೋಂಕು:
ಜಿಲ್ಲೆಯ ಚಿಟಗುಪ್ಪ ಪೊಲೀಸ್ ಠಾಣೆ ಪಿಎಸ್ಐ ಸೇರಿ ನಾಲ್ವರು ಕಾನ್ಸ್ಟೇಬಲ್ಗಳಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ಈ ಪೈಕಿ ಒಬ್ಬ ಕಾನ್ಸ್ಟೇಬಲ್ ಗುಣಮುಖರಾಗಿ ಮನೆಗೆ ವಾಪಸಾಗಿದ್ದಾರೆ. ಪಿಎಸ್ಐ ಅವರನ್ನು ಕ್ವಾರಂಟೈನ್ ಮಾಡಲಾಗಿತ್ತು. ಈ ವೇಳೆ ಗಂಟಲು ದ್ರವ ಪರಿಕ್ಷೆ ಮಾಡಿದಾಗ ಸೋಂಕು ಇರುವುದು ಪತ್ತೆಯಾಗಿದೆ.
ಜಿಲ್ಲೆಯಲ್ಲಿ ಜನಪ್ರತಿನಿಧಿಗಳು, ಕೊರೊನಾ ವಾರಿಯರ್ಸ್ಗೆ ಸೋಂಕು ತಗಲುವ ಮೂಲಕ ಸೋಂಕಿನ ಮೂಲ ಪತ್ತೆ ಹಚ್ಚುವುದು ತುಂಬಾ ಕಷ್ಟವಾಗಿದೆ. ಅಲ್ಲದೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ದಿನಕ್ಕೆ ಸಾವಿರಾರು ಜನರ ಸಂಪರ್ಕಕ್ಕೆ ಬರೋದ್ರಿಂದ ಇವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚುವ ಕೆಲಸ ಕೂಡ ಸವಾಲಾಗಿ ಪರಿಣಮಿಸಿದೆ.