ಚಿತ್ರದುರ್ಗ/ ಯಾದಗಿರಿ/ ಬೀದರ್: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ನಿಧಾನವಾಗಿ ಇಳಿಕೆಯಾಗುತ್ತಿದ್ದು, ಬುಧವಾರದಂದು ಬೀದರ್, ಚಿತ್ರದುರ್ಗ ಮತ್ತು ಯಾದಗಿರಿಯಲ್ಲಿ 101, 183 ಹಾಗೂ 30 ಸೋಂಕಿತರು ಗುಣಮುಖರಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ 75 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಒಟ್ಟಾರೆ ಸಂಖ್ಯೆ 11,549ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಮೂವರು ಮೃತಪಟ್ಟಿದ್ದು, 183 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಒಟ್ಟು 1,922 ಜನರ ಗಂಟಲು, ಮೂಗು ದ್ರವ ಮಾದರಿ ಸಂಗ್ರಹಿಸಲಾಗಿದೆ. ಇದುವರೆಗೆ 54 ಜನ ಕೋವಿಡ್ ಹಾಗೂ ಇತರೆ ಕಾರಣದಿಂದ ಒಬ್ಬರು ಸಾವನ್ನಪ್ಪಿದ್ದಾರೆ. 10,526 ಜನರು ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಸದ್ಯ 968 ಸಕ್ರಿಯ ಪ್ರಕರಣಗಳಿವೆ.
ಯಾದಗಿರಿಯಲ್ಲಿ 101 ಜನ ಡಿಸ್ಚಾರ್ಜ್
ಯಾದಗಿರಿ ಜಿಲ್ಲೆಯಲ್ಲಿ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದವರಲ್ಲಿ ಬುಧವಾರ 101 ಜನ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಒಟ್ಟಾರೆ 9,411 ಮಂದಿ ಗುಣಮುಖರಾಗಿದ್ದಾರೆ. ಹೊಸದಾಗಿ 31 ಜನರಲ್ಲಿ ಸೋಂಕು ಇರುವುದ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 9,836ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಇದುವರೆಗೆ ಜಿಲ್ಲೆಯಲ್ಲಿ 60 ಜನ ಮೃತಪಟ್ಟಿದ್ದು, 365 ಸಕ್ರಿಯ ಪ್ರಕರಣಗಳಿವೆ.
ಬೀದರ್ನಲ್ಲಿ 30 ಸೋಂಕಿತರ ಬಿಡುಗಡೆ
ಬೀದರ್ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹತೋಟಿಗೆ ಬಂದಂತೆ ಕಾಣುತ್ತಿದೆ. ಬುಧವಾರ 10 ಜನರಲ್ಲಿ ಸೋಂಕು ಪತ್ತೆಯಾಗಿದ್ದರೇ 30 ಸೋಂಕಿತರು ಗುಣಮುಖರಾಗಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 6,825ಕ್ಕೆ ಏರಿಕೆಯಾಗಿದೆ. 6,552 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 163 ಜನರು ಸಾವನಪ್ಪಿದ್ದು, 106 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.