ಬಸವಕಲ್ಯಾಣ: ಪಂಚಾಯತ್ ಸದಸ್ಯರ ಅಧಿಕಾರಾವಧಿ ಮುಗಿದಿರುವ ಕಾರಣ ಹಾಲಿ ಸದಸ್ಯರನ್ನೇ ಮುಂದುವರೆಸಬೇಕೆಂದು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ (ಡಬ್ಲೂಪಿಐ) ತಾಲೂಕು ಘಟಕ ಒತ್ತಾಯಿಸಿದೆ.
ರಾಜ್ಯ ಕಾರ್ಯದರ್ಶಿ ಮುಜಾಹಿದ್‌ಪಾಶಾ ಖುರೇಶಿ ಅವರ ನೇತೃತ್ವದಲ್ಲಿಯ ನಿಯೋಗದಿಂದ ಮಿನಿ ವಿಧಾನ ಸೌಧಕ್ಕೆ ತೆರಳಿ ಬೇಡಿಕೆ ಕುರಿತು ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ಉಪ ತಹಶೀಲ್ದಾರ್ ಶಿವಾನಂದ ಮೇತ್ರೆ ಅವರಿಗೆ ಸಲ್ಲಿಸಲಾಗಿದೆ. ಗ್ರಾ.ಪಂ. ಗಳ ಅವಧಿ ಮೇ ಅಂತ್ಯಕ್ಕೆ ಕೊನೆಗೊಳ್ಳಲಿದೆ. ಕೆಲ ಗ್ರಾ.ಪಂ ಅವಧಿ ಜೂನ್ ಮತ್ತು ಜುಲೈನಲ್ಲಿ ಮುಗಿಯಲಿದೆ. ಮೇ ಮತ್ತು ಜೂನ್ ತಿಂಗಳಲ್ಲಿ ರಾಜ್ಯದ 6041 ಗ್ರಾ.ಪಂ. ಗಳಿಗೆ ಚುನಾವಣೆ ನಡೆಯಬೇಕಿದೆ.
ಕೋವಿಡ್ -19ನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇದನ್ನೇ ನೆಪ ಮಾಡಿಕೊಂಡು ಚುನಾವಣೆ ಮುಂದೂಡಿ, ಅಡಳಿತ ಸಮಿತಿ ಅಥವಾ ಆಡಳಿತಾಧಿಕಾರಿ ನೇಮಕ ಮಾಡಲು ಮುಂದಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಒಂದೊಮ್ಮೆ ಚುನಾವಣೆ ಮುಂದೂಡುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾದರೆ ಆಡಳಿತ ಸಮಿತಿಯ ಬದಲು ಹಾಲಿ ಸದಸ್ಯರನ್ನು ಮುಂದುವರಿಸಲು ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಮನವಿ ಪತ್ರದಲ್ಲಿ ಕೋರಲಾಗಿದೆ.
ಪ್ರಮುಖರಾದ ಮಹ್ಮದ ಇಸ್ಮಾಯಿಲ್ ಬಿಲಾಲ್, ಯಾಕುಬ್ ಅಕ್ತರ, ಪರ್ವೆಜ್ ಕಾರಿಗಾರ, ಮಹ್ಮದ ಅರ್ಫಾದ ಅಹ್ಮದ, ಮಹ್ಮದ ಜಾವೇದ್, ಮಹ್ಮದ ಝಿಯಾ, ಸೇರಿದಂತೆ ಇತರರು ಹಾಜರಿದ್ದರು.