ಕರ್ನಾಟಕ

karnataka

ETV Bharat / state

ಬೀದರ್: ಪ್ರಚಾರದಲ್ಲಿ ತೊಡಗಿದ್ದ ಕಾಂಗ್ರೆಸ್ ಕಾರ್ಯಕರ್ತನಿಗೆ ಚಾಕು ಇರಿತ - ಕರ್ನಾಟಕ ವಿಧಾನಸಭೆ ಚುನಾವಣೆ

ಕಾಂಗ್ರೆಸ್ ಕಾರ್ಯಕರ್ತನಿಗೆ ಚಾಕು ಇರಿತ - ಭಾಲ್ಕಿಯಲ್ಲಿ ಪ್ರಚಾರ ಮಾಡುತ್ತಿದ್ದ ವೇಳೆ ಘಟನೆ- ಆರೋಪಿಗಳ ವಿರುದ್ಧ ನಗರ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲು.

Congress worker stabbed in Bidar
ಕಾಂಗ್ರೆಸ್ ಕಾರ್ಯಕರ್ತನಿಗೆ ಚಾಕು ಇರಿತ

By

Published : Apr 23, 2023, 7:06 AM IST

Updated : Apr 23, 2023, 12:32 PM IST

ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಪ್ರತಿಕ್ರಿಯೆ..

ಬೀದರ್: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಭಾಲ್ಕಿಯಲ್ಲಿ ಪ್ರಚಾರ ಮಾಡುತ್ತಿದ್ದ ವೇಳೆ ಕಾಂಗ್ರೆಸ್ ಕಾರ್ಯಕರ್ತನಿಗೆ ಚಾಕು ಇರಿದು ಗಾಯಗೊಳಿಸಿರುವ ಘಟನೆ ಶನಿವಾರ ಸಂಜೆ ನಡೆದಿದೆ. ಗಣೇಶ ಯರಬಾಗೆ (23) ಗಾಯಗೊಂಡ ಯುವಕ. ಪಟ್ಟಣದ ಇಶಾನ್ ಬಡಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಪರವಾಗಿ ಪ್ರಚಾರ ಮಾಡುತ್ತಿದ್ದ ಗಣೇಶ ಮೇಲೆ ಮೂವರು ದಿಢೀರ್ ಹಲ್ಲೆ ನಡೆಸಿದ್ದಾರೆ. ತಕ್ಷಣ ಗಣೇಶ ಅವರನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‍ನ ಆಸ್ಪತ್ರೆಗೆ ರವಾನಿಸಲಾಗಿದೆ.

ರಾಬೀನ್ ಬಿರಾದಾರ್, ಸಂಗಮೇಶ ಸ್ವಾಮಿ ಮತ್ತು ಸಂಗಮೇಶ ಎಂಬುವವರು ಗಣೇಶ ಅವರ ಹೊಟ್ಟೆ ಮತ್ತು ಎದೆ ಭಾಗಕ್ಕೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಇವರ ವಿರುದ್ಧ ಪಟ್ಟಣದ ನಗರ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಸ್ಪತ್ರೆಗೆ ಶಾಸಕ ಖಂಡ್ರೆ ಭೇಟಿ:ವಿಷಯ ತಿಳಿಯುತ್ತಿದ್ದಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಪಟ್ಟಣದ ಆಸ್ಪತ್ರೆಗೆ ಭೇಟಿ ನೀಡಿ ಕಾರ್ಯಕರ್ತ ಗಣೇಶ ಅವರ ಆರೋಗ್ಯ ವಿಚಾರಿಸಿದರು. "ಬಿಜೆಪಿಯವರು ಸೋಲಿನ ಭಯದಿಂದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಈ ರೀತಿ ಗೂಂಡಾವರ್ತನೆ ಬಹಳ ದಿನ ನಡೆಯಲ್ಲ. ಭಾಲ್ಕಿ ಕ್ಷೇತ್ರದಲ್ಲಿ ಬಿಜೆಪಿಯವರು ಮಾಡುತ್ತಿರುವ ಅಕ್ರಮ ಬಗ್ಗೆ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ಮಾಡಿದರೆ ಜಿಲ್ಲಾಡಳಿತವೇ ನೇರ ಹೊಣೆ" ಎಂದು ಖಂಡ್ರೆ ಎಚ್ಚರಿಕೆ ನೀಡಿದರು.

ಇದನ್ನೂ ಓದಿ:ಭದ್ರಾವತಿಯಲ್ಲಿ ಗಾಂಜಾ ವಿಚಾರಕ್ಕೆ ಗಲಾಟೆ: ಚಾಕುವಿನಿಂದ‌ ಇರಿದು ಯುವಕನ ಕೊಲೆ

ಹಲ್ಲೆ ಯತ್ನ:ಆಮ್ ಆದ್ಮಿ ಪಕ್ಷದ (ಆಪ್) ರಾಜ್ಯ ಯುವ ಘಟಕದ ಉಪಾಧ್ಯಕ್ಷನ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ಇತ್ತೀಚೆಗೆ ಬೆಂಗಳೂರಿನ ಅಮೃತಹಳ್ಳಿ ಠಾಣಾ ವ್ಯಾಪ್ತಿಯ ಜಕ್ಕೂರು ಮುಖ್ಯರಸ್ತೆಯಲ್ಲಿ ನಡೆದಿತ್ತು. ಸ್ನೇಹಿತರ ಜತೆ ಯಲಹಂಕದಿಂದ ಕೆ.ಆರ್.ಪುರಂ ಕಡೆ ತೆರಳುತ್ತಿದ್ದ ಆಪ್ ಉಪಾಧ್ಯಕ್ಷ ಗಿರೀಶ್ ಕುಮಾರ್ ನಾಯ್ಡುರನ್ನು ತಡೆದ ಅಪರಿಚಿತ ಯುವಕರು ತಗಾದೆ ತೆಗೆದು ಮದ್ಯದ ಬಾಟಲಿಯಿಂದ ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪಾರ್ಥೀಬನ್ ಎಂಬುವವರು ಅಮೃತಹಳ್ಳಿ ಠಾಣೆಗೆ ದೂರು ನೀಡಿದ್ದರು.

ಕೆ.ಆರ್.ಪುರಂ ಮಾರ್ಗವಾಗಿ ಸಾಗುತ್ತಿದ್ದಾಗ ಗಿರೀಶ್ ನಾಯ್ಡು ಅವರಿದ್ದ ಕಾರನ್ನು ಓವರ್ ಟೇಕ್ ಮಾಡಿದ ಎರಡು ದ್ವಿಚಕ್ರ ವಾಹನಗಳಲ್ಲಿದ್ದ ಪಾನಮತ್ತ ಯುವಕರು, ಏಕಾಏಕಿ ಅವಾಚ್ಯ ಶಬ್ಧಗಳಿಂದ ನಿಂದಿಸಲು ಆರಂಭಿಸಿದ್ದರು. ಯಾಕೆ ಗಲಾಟೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದಾಗ, ತಮ್ಮ ಕೈಯ್ಯಲ್ಲಿದ್ದ ಬಾಟಲ್ ನೆಲಕ್ಕೆ ಹೊಡೆದು ಗಿರೀಶ್ ಕುಮಾರ್ ಮತ್ತವರ ಜೊತೆಯಲ್ಲಿದ್ದವರ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಜೊತೆಗೆ ಜೀವಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದರು. ಈ ಬಗ್ಗೆ ಗಿರೀಶ್ ಕುಮಾರ್ ನಾಯ್ಡುರ ಸ್ನೇಹಿತ ಪಾರ್ಥೀಬನ್ ನೀಡಿರುವ ದೂರಿನನ್ವಯ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಇದನ್ನೂ ಓದಿ:ಆಪ್ ಯುವ ಘಟಕದ ಉಪಾಧ್ಯಕ್ಷನ ಮೇಲೆ ಅಪರಿಚಿತರಿಂದ ಹಲ್ಲೆ ಯತ್ನ: ಪ್ರಕರಣ ದಾಖಲು

Last Updated : Apr 23, 2023, 12:32 PM IST

ABOUT THE AUTHOR

...view details