ಬೀದರ್ : ರಾಜ್ಯದೆಲ್ಲೆಡೆ ಕಾಂಗ್ರೆಸ್ ಪರವಾದ ಅಲೆ ಇದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಆದರೆ 40 ಪರ್ಸೆಂಟ್ ಕಮಿಷನ್ ಪಡೆವ ಬಿಜೆಪಿಯವರು ಶಾಸಕರನ್ನು ಖರೀದಿಸಲು ಮುಂದಾಗುವ ಸಾಧ್ಯತೆ ಇದೆ. ಹೀಗಾಗಿ ಪೂರ್ಣ ಬಹುಮತ ನೀಡಬೇಕು. 150 ಸೀಟುಗಳನ್ನು ಗೆದ್ದು ಆಡಳಿತ ನಡೆಸಲು ರಾಜ್ಯದ ಜನತೆ ಬೆಂಬಲಿಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ.
ಭಾಲ್ಕಿ ಮತ್ತು ಹುಮನಾಬಾದ್‌ನಲ್ಲಿ ಜನ ಕ್ರಾಂತಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ದುರಾಡಳಿತ ನಾವೆಲ್ಲರೂ ನೋಡಿದ್ದೇವೆ. ಬಿಜೆಪಿ ಆಡಳಿತದಲ್ಲಿ ಎಲ್ಲ ಕೆಲಸಕ್ಕೂ ಮೊದಲು 40 ಪರ್ಸೆಂಟ್ ಕಮಿಷನ್ ಪಡೆದ ನಂತರವೇ ಮುಂದಿನ ಚಟುವಟಿಕೆ ನಡೆಯುತ್ತಿದ್ದವು. ಈ ಬಗ್ಗೆ ಖುದ್ದು ಗುತ್ತಿಗೆದಾರರ ಸಂಘವು ಪ್ರಧಾನಿ ಅವರಿಗೆ ಪತ್ರ ಬರೆದಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೊದಲ ದಿನವೇ ಕಾಂಗ್ರೆಸ್ ನೀಡಿದ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗುವುದು. ಪ್ರತಿ ತಿಂಗಳು 200 ಯುನಿಟ್ ಉಚಿತ ವಿದ್ಯುತ್, ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ರೂ. ಪ್ರೋತ್ಸಾಹ ಧನ, ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ ಮತ್ತು ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳು 3 ಸಾವಿರ ರೂ., ಡಿಪ್ಲೊಮಾ ಪದವೀಧರರಿಗೆ 1500 ರೂ. ನೀಡುವ ಗ್ಯಾರಂಟಿ ಯೋಜನೆಗಳು ಜಾರಿಗೆ ತರಲಾಗುವುದು ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದ ಸರ್ವಾಂಗೀಣ ಅಭಿವೃದ್ಧಿಗಾಗಿ 371(ಜೆ) ಜಾರಿ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಈ ಕೆಲಸ ಮಾಡಲು ಆಗಲ್ಲ ಎಂದು ಬಿಜೆಪಿ ಹೇಳಿತ್ತು. ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ಗಮನಕ್ಕೆ ತಂದಾಗ ಇದನ್ನು ಜಾರಿಗೆ ತರಲು ತಕ್ಷಣ ಕ್ರಮಕೈಗೊಳ್ಳಲಾಯಿತು. ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತು ಹಾಕಿ ನುಡಿದಂತೆ ನಡೆಯುವ ಕಾಂಗ್ರೆಸ್‌ಗೆ ಅವಕಾಶ ನೀಡಬೇಕು ಎಂದು ಇದೇ ವೇಳೆ ಕೇಳಿಕೊಂಡರು.