ಬೀದರ್:ಕಿತ್ತು ತಿನ್ನುವ ಬಡತನ, ಅನಕ್ಷರತೆ ಮತ್ತು ಹೆಣ್ಣು ಹುಟ್ಟಿದ ತಾತ್ಸಾರ ಭಾವನೆ ಮೈಗೂಡಿಸಿಕೊಂಡ ಅದೆಷ್ಟೋ ಪೋಷಕರು ಲಾಕ್ಡೌನ್ ವೇಳೆಯಲ್ಲಿ ಸದ್ದಿಲ್ಲದೇ ಅನಿಷ್ಟ ಬಾಲ್ಯ ವಿವಾಹಕ್ಕೆ ಮುಂದಾಗಿದ್ದಾರೆ. ಲಾಕ್ಡೌನ್ ಅವಧಿಯ ಮೂರು ತಿಂಗಳಲ್ಲೇ ಅಧಿಕಾರಿಗಳ ತಂಡ ಬರೋಬ್ಬರಿ 25 ಬಾಲ್ಯ ವಿವಾಹ ತಡೆದಿದ್ದಾರೆ.
ದೇಶವೇ ಕೊವಿಡ್-19 ವೈರಾಣು ಸೋಂಕಿನಿಂದ ತತ್ತರಿಸಿ ಹೋಗಿ ತಲೆ ಕೆಡಿಸಿಕೊಂಡ್ರೆ. ಬೀದರ್ ಜಿಲ್ಲೆಯಲ್ಲಿ ಹೆಣ್ಣು ಹೆತ್ತ ಪೋಷಕರು ಹೇಗಾದರೂ ಸರಿ ಮಗಳ ಮದುವೆ ಮಾಡಿ ಜವಾಬ್ದಾರಿಯಿಂದ ಜಾರಿಕೊಳ್ಳಲು ಲಾಕ್ಡೌನ್ ಅವಧಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಲಾಕ್ಡೌನ್ ವೇಳೆಯಲ್ಲಿ ಅನಿಷ್ಟ ಬಾಲ್ಯ ವಿವಾಹ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು, ಮಕ್ಕಳ ಸಹಾಯವಾಣಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜಿಲ್ಲೆಯಾದ್ಯಂತ ದಾಳಿ ನಡೆಸಿ ನಡೆಯುತ್ತಿದ್ದ 25 ಬಾಲ್ಯ ವಿವಾಹಗಳನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದು ಚಿಟಗುಪ್ಪ ತಾಲೂಕಿನ ನಿರ್ಣಾ ಗ್ರಾಮದಲ್ಲಿ ಪ್ರಕರಣವೊಂದು ದಾಖಲಿಸಿದ್ದಾರೆ. ಬಾಲ್ಯ ವಿವಾಹ ಸಾಮಾಜಿಕ ಪಿಡುಗು, ಎಳೆ ವಯಸ್ಸಿನ ಮಕ್ಕಳಿಗೆ ದಾಂಪತ್ಯ ಜೀವನಕ್ಕೆ ತಳ್ಳುವುದರಿಂದ ಹುಟ್ಟುವ ಮಕ್ಕಳು ವಿಶೇಷ ಚೇತನರಾಗುತ್ತಾರೆ. ಬಾಲ್ಯ ವಿವಾಹಕ್ಕೆ ಒಳಗಾದ ಮಕ್ಕಳ ಆಯಸ್ಸು ಕಮ್ಮಿಯಾಗುತ್ತೆ. ಹೀಗಾಗಿ 2006 ರಲ್ಲಿ ಬಾಲ್ಯ ವಿವಾಹ ಅಪರಾಧ ಎಂದು ಪರಿಗಣಿಸಿ ಕೃತ್ಯದಲ್ಲಿ ತೊಡಗಿದವರಿಗೆ 2 ವರ್ಷ ಜೈಲು ಶಿಕ್ಷೆ 1 ಲಕ್ಷ.ರೂ ದಂಡ ವಿಧಿಸಬಹುದು ಎಂಬ ಕಠಿಣ ಕಾನೂನು ಇದೆ ಎಂದು ಜಿಲ್ಲಾ ಶಿಶು ಅಭಿವೃದ್ಧಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶ್ರೀಕಾಂತ ಕುಲಕರ್ಣಿ ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ಜಾರಿಗೆ ತರಲಾದ ಲಾಕ್ಡೌನ್ ವೇಳೆಯಲ್ಲಿ ಕೆಲವರು ಬಾಲ್ಯ ವಿವಾಹಕ್ಕೆ ಮುಂದಾಗಿದ್ದಾರೆ. ಲಾಕ್ಡೌನ್ನಲ್ಲಿ ಮದುವೆಯಾದ್ರೆ ಅದು ಸರಳವಾಗಿರುತ್ತೆ ಖರ್ಚು ಇರೊದಿಲ್ಲ. ಹೀಗಾಗಿ ಸದ್ದಿಲ್ಲದೇ ಮದುವೆಗೆ ಸಿದ್ದತೆ ಮಾಡಿಕೊಂಡಂತಹ 25 ವಿವಿಧ ಪ್ರಕರಣಗಳು ಬೆಳಕಿಗೆ ಬಂದಿವೆ. ಪೋಷಕರ ಬಡತನ, ಅನಕ್ಷರತೆ ಹಾಗೂ ಹೆಣ್ಣಿನ ಮದುವೆ ಜವಾಬ್ದಾರಿ ನಿರ್ವಹಿಸುವ ಜವಾಬ್ದಾರಿಯಿಂದ ಬಾಲ್ಯ ವಿವಾಹಕ್ಕೆ ಮುಂದಾಗಿರುವುದನ್ನ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಇದಷ್ಟೆ ಅಲ್ಲದೆ ಏಪ್ರಿಲ್ ತಿಂಗಳಲ್ಲಿ ಬರುವ ಅಕ್ಷಯ ತೃತೀಯ ದಿನದಂದು ಜನರು ಹೆಚ್ಚಿನ ಮದುವೆ ಮಾಡ್ತಾರೆ. ಲಾಕ್ಡೌನ್ ವೇಳೆಯಲ್ಲೇ ಬಂದ ಅಕ್ಷಯ ತೃತೀಯ ದಿನ ಬಾಲ್ಯ ವಿವಾಹಗಳು ಹೆಚ್ಚಾಗಿ ಆಗಿರುವುದು ಬೆಳಕಿಗೆ ಬಂದಿದೆ. ಕೊರೊನಾ ಸಂದರ್ಭದಲ್ಲಿ ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮನೆಯಿಂದ ಹೊರ ಬಾರದೇ ಇದ್ದಾಗ ಗುಟ್ಟಾಗಿ ಮನೆ ಮುಂದೆ ಸಣ್ಣದೊಂದು ಹಂದರ(ಮಂಟಪ) ನೆಂಟರಿಲ್ಲ, ಊರ ಜನ ಇಲ್ಲ, ಯಾರೂ ಇಲ್ಲದಾಗ ಜನರೇ ಬರದ ಕಾರ್ಯಕ್ರಮದಲ್ಲಿ ಖರ್ಚಿಲ್ಲದೆ ಸುಗಮವಾಗಿ ಮದುವೆ ಮಾಡಿ ಕೈ ತೊಳೆದುಕೊಳ್ಳುವ ಪ್ಲಾನ್ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.