ಬೀದರ್:ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಜನಪರ ಉತ್ಸವದಲ್ಲಿ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಬ್ಯಾಂಡ್ ಬಾಜಾ ಸದ್ದಿಗೆ ಮೈಮರೆತು ಸಖತ್ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದ್ರು.
ಪಶು ಸಂಗೋಪನಾ ಸಚಿವ ಚವ್ಹಾಣ ಜನಪರ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಿಲ್ಲೆಯ ಔರಾದ್ ಪಟ್ಟಣದಲ್ಲಿ ಆಯೋಜಿಸಿದ್ದ ಈ ಉತ್ಸವದ ಮೆರವಣಿಗೆಯಲ್ಲಿ ಸಚಿವ ಪ್ರಭು ಚವ್ಹಾಣ್ ಬ್ಯಾಂಡ್ ವಾದ್ಯಕ್ಕೆ ತಕ್ಕಂತೆ ಹೆಜ್ಜೆಹಾಕಿದರು.
ಸಾಂಪ್ರದಾಯಿಕ ಕಲೆ ಹಾಗೂ ಜಾನಪದ ಪರಂಪರೆಯನ್ನು ಜೀವಂತವಾಗಿಡಬೇಕಾಗಿದೆ. ಡಿಜಿಟಲ್ ಹಾವಳಿಯಿಂದ ಮೊಬೈಲ್ ಬಳಕೆಯಿಂದಾಗಿ ಜಾನಪದ ಕಲೆ ಅವಸಾನದ ಅಂಚಿನಲ್ಲಿ ಬಂದಿದೆ. ಕಲೆಯನ್ನು ಪೋಷಿಸುವ ಮೂಲಕ ಸಂಸ್ಕೃತಿಯನ್ನು ಉಳಿಸುವ ಪ್ರಯತ್ನಗಳು ಸಾಮೂಹಿಕವಾಗಿ ನಡೆಯಬೇಕಿದೆ ಎಂದು ಈ ಸಂದರ್ಭದಲ್ಲಿ ಸಚಿವ ಚವ್ಹಾಣ ಹೇಳಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಸಂತಸದ ಸುದ್ದಿಯಿದೆ. ಜಿಲ್ಲೆಯ ಸಹಕಾರ ಸಕ್ಕರೆ ಕಾರ್ಖಾನೆಗಳು ಈ ಬಾರಿ ಕಬ್ಬಿಗೆ ನಿಗದಿತ ಬೆಲೆಗಿಂತ 350 ರೂಪಾಯಿ ಹೆಚ್ಚುವರಿ ಬೆಲೆ ನೀಡಲು ಒಪ್ಪಿಗೆ ಕೊಟ್ಟಿದ್ದಾರೆ. ಇದರಿಂದಾಗಿ ಪ್ರತಿ ಟನ್ ಕಬ್ಬಿಗೆ 2250 ರೂಪಾಯಿ ಬೆಲೆ ನಿಗದಿಗೆ ತೀರ್ಮಾನ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿ.ಪಂ ಅಧ್ಯಕ್ಷೆ ಗೀತಾ ಪಂಡಿತ ಚಿದ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕರಾದ ಶಿಂಧೆ, ಮುಖಂಡರಾದ ಸುರೇಶ ಭೋಸ್ಲೆ, ಕಾಶಿನಾಥ್ ಜಾಧವ್, ಮಾರುತಿ ಚವ್ಹಾಣ, ಸಚಿನ ರಾಠೋಡ, ವಿಜಯಕುಮಾರ್ ಸೋನಾರೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.