ಬೀದರ್:ಜೈಪುರ ಎಕ್ಸ್‌ಪ್ರೆಸ್‌ನಲ್ಲಿ ಸೋಮವಾರ ಬೆಳಗ್ಗೆ ನಡೆದಿದ್ದ ಗುಂಡಿನ ದಾಳಿ ದೇಶಾದ್ಯಂತ ಕೋಲಾಹಲ ಸೃಷ್ಟಿಸಿತ್ತು. ರಾಜಸ್ಥಾನದ ಜೈಪುರದಿಂದ ಮುಂಬೈಗೆ ಬರುತ್ತಿದ್ದ ರೈಲಿನಲ್ಲಿ ಆರೋಪಿ ಆರ್‌ಪಿಎಫ್ ಕಾನ್‌ಸ್ಟೆಬಲ್ ಚೇತನ್ ಸಿಂಗ್ ಮನಬಂದಂತೆ ಗುಂಡಿನ ದಾಳಿ ನಡೆಸಿ ನಾಲ್ವರನ್ನು ಹತ್ಯೆ ಮಾಡಿದ್ದನು. ಹತ್ಯೆಗೊಳಗಾದವರಲ್ಲಿ ಬೀದರ್ ಜಿಲ್ಲೆಯ ಒಬ್ಬ ಪ್ರಯಾಣಿಕ ಇರುವುದು ಬೆಳಕಿಗೆ ಬಂದಿದೆ.
ತಾಲೂಕಿನ ಹಮೀಲಾಪುರದ ನಿವಾಸಿ ಸೈಯದ್ ಸೈಫುದ್ದೀನ್ ಮುನಿರೊದ್ದೀನ್ ಗುಂಡಿಗೆ ಬಲಿಯಾದ ವ್ಯಕ್ತಿ. ಸೈಫುದ್ದೀನ್ ಕಳೆದ ಹಲವು ವರ್ಷಗಳಿಂದ ಹೈದರಾಬಾದ್ನ ರಿಂಗ್ ಕೋಟಿ ಪ್ರದೇಶದ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಅಂಗಡಿಯ ಮಾಲೀಕರ ಜೊತೆಗೆ ರಾಜಸ್ಥಾನದ ಅಜ್ಮೇರ್ಗೆ ಹೋಗಿ ರೈಲಿನಲ್ಲಿ ಬರುವಾಗ ಈ ಘಟನೆ ನಡೆದಿತ್ತು. ಸೈಫುದ್ದೀನ್ ಪತ್ನಿ ಹಾಗೂ ಮೂವರು ಪುತ್ರಿಯರು ಸ್ವಗ್ರಾಮದಲ್ಲಿ ವಾಸ ಮಾಡುತ್ತಿದ್ದಾರೆ. ಘಟನೆಯಿಂದ ಗ್ರಾಮದಲ್ಲಿ ನೀರವಮೌನ ಆವರಿಸಿದೆ. ಮೃತದೇಹ ಬುಧವಾರ ಬರಲಿದೆ ಎಂದು ಮೂಲಗಳು ತಿಳಿಸಿವೆ.
ಜೈಪುರ- ಮುಂಬೈ ಸೆಂಟ್ರಲ್ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲಿನಲ್ಲಿ ಸೋಮವಾರ ಬೆಳಗ್ಗೆ ಘಟನೆ ನಡೆದಿತ್ತು. ಆರ್ಪಿಎಫ್ನ ಕಾನ್‌ಸ್ಟೆಬಲ್ ಚೇತನ್ ಸಿಂಗ್ ತನ್ನ ಬಳಿಯಿದ್ದ ಬಂದೂಕಿನಿಂದ ಗುಂಡು ಹಾರಿಸಿ ತನ್ನ ಹಿರಿಯ ಅಧಿಕಾರಿಯೊಬ್ಬರ ಹತ್ಯೆ ಮಾಡಿದ ನಂತರ, ಮೂವರು ಪ್ರಯಾಣಿಕರನ್ನು ಸಹ ಗುಂಡು ಹಾರಿಸಿ ಕೊಂದಿದ್ದ. ಅದರಲ್ಲಿ ಬೀದರ್ ಜಿಲ್ಲೆಯ ಸೈಫುದ್ದೀನ್ ಸಹ ಒಬ್ಬರು.