ಕರ್ನಾಟಕ

karnataka

ETV Bharat / state

ಬಸವಕಲ್ಯಾಣ ಉಪ ಚುನಾವಣೆ ಮತದಾನ ಸಂಪೂರ್ಣ ಶಾಂತಿಯುತ: ಸಖಿ ಕೇಂದ್ರದಲ್ಲಿ ಸುಖಿ ಮತದಾನ - ಬಸವಕಲ್ಯಾಣ ಬೈ ಎಲೆಕ್ಷನ್​

ಬಸವಕಲ್ಯಾಣ ಕ್ಷೇತ್ರ 326 ಮತಗಟ್ಟೆಗಳಲ್ಲಿ ಇಂದು ಶಾಂತಿಯುತ ಮತದಾನವಾಗಿದ್ದು, ಒಟ್ಟು ಶೇ. 59.57 ರಷ್ಟು ಮತದಾನವಾಗಿದೆ.

basavkalyana
ಬಸವಕಲ್ಯಾಣ ಉಪ ಚುನಾವಣೆ ಮತದಾನ

By

Published : Apr 17, 2021, 11:35 PM IST

ಬಸವಕಲ್ಯಾಣ:ಶಾಸಕ ಬಿ.ನಾರಾಯಣರಾವ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆ ಪ್ರಕ್ರಿಯೆ ಸಂಪೂರ್ಣ ಶಾಂತಿಯುತವಾಗಿ ನಡೆದಿದ್ದು, ಕ್ಷೇತ್ರದಲ್ಲಿ ಒಟ್ಟು ಶೇ. 59.57 ರಷ್ಟು ಮತದಾನ ನಡೆದಿದೆ.

ಬಸವಕಲ್ಯಾಣ ಉಪ ಚುನಾವಣೆ ಮತದಾನ

ಕ್ಷೇತ್ರ ವ್ಯಾಪ್ತಿಯ 326 ಮತಗಟ್ಟೆಗಳಲ್ಲಿ ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಆಯಾ ಪಕ್ಷಗಳ ಕಾರ್ಯಕರ್ತರು ಪ್ರತ್ಯೇಕವಾಗಿ ಟೆಂಟ್‌ಗಳನ್ನು ಹಾಕಿ ತಮ್ಮ ಪಕ್ಷದ ಅಭ್ಯರ್ಥಿಗೆ ಮತ ನೀಡುವಂತೆ ಮತದಾರಿಗೆ ಮನವೊಲಿಸಿದ್ದು ಕಂಡು ಬಂತು. ಮತದಾರರಿಗೆ ಬಿಸಿಲಿನಿಂದ ತಪ್ಪಿಸುವ ಉದ್ದೇಶದಿಂದ ಮತಗಟ್ಟೆ ಕೇಂದ್ರಗಳಲ್ಲಿ ಆಡಳಿತದಿಂದ ಟೆಂಟ್ ಹಾಕಿ ನೆರಳಿನ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು. ಕೆಲವು ಕಡೆಗಳಲ್ಲಿ ಬಿಸಿಲನ್ನು ಲೆಕ್ಕಿಸದೇ ವಯೋವೃದ್ದರು, ವಿಕಲಚೇತನರು ಸೇರಿದಂತೆ ಮತದಾರರು, ಯುವಕರು ಮತಗಟ್ಟೆಗಳತ್ತ ಬಂದು ತಮ್ಮ ಹಕ್ಕು ಚಲಾಯಿಸಿದ್ರು.

ತಾಲೂಕಿನ ಮಂಠಾಳ, ಮುಡಬಿ, ಲಾಡವಂತಿ, ಬಟಗೇರಾ, ಕಲಖೋರಾ, ಸಸ್ತಾಪೂರ್, ಮುಚಳಂಬ, ನಾರಾಯಣಪುರ, ಬೋಸ್ಗಾ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಗ್ರಾಮೀಣ ಅಂಗವಿಕಲ ಪುನರ್ವಸತಿ ಕಾರ್ಯಕರ್ತರ ಸಹಾಯದಿಂದ ವಿಕಲಚೇತನರು ಹಾಗೂ ಹಿರಿಯ ನಾಗರಿಕರು ಮತದಾನವನ್ನು ಮಾಡಿದರು.

ಪಾಲನೆಯಾಗದ ಕೋವಿಡ್ ನಿಯಮ:

ಮಹಾಮಾರಿಯಾಗಿ ಕಾಡುತ್ತಿರುವ ಕೊರೊನಾ ಎರಡನೆ ಅಲೆಯ ನಡುವೆಯೂ ನಡೆದ ಉಪ ಚುನಾವಣೆ ಮತದಾನ ಕೇಂದ್ರಗಳಲ್ಲಿ ಕೋವಿಡ್ ನಿಯಮಗಳು ಗಾಳಿಗೆ ತೂರಿದ್ದು ಕಂಡು ಬಂತು. ಮತಗಟ್ಟೆ ಕೇಂದ್ರದ ಬಳಿ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್​ ಮಾಡದೇ ಒಳ ಬಿಟ್ಟಿದ್ದು, ಹಾಗೂ ಸಾಮಾಜಿಕ ಅಂತರ ಕಾಪಾಡದೇ ಇರುವುದು ಕಂಡು ಬಂತು. ಕೋವಿಡ್ ನಿಯಮ ಪಾಲನೆ ಮಾಡದೇ ನಡೆದ ಮತದಾನದಿಂದಾಗಿ ಕೆಲವು ಮತದಾರರು ಆತಂಕಕ್ಕೆ ಒಳಗಾಗಿ ಮತಗಟ್ಟೆ ಕೇಂದ್ರಗಳತ್ತ ಸುಳಿಯದೇ ದೂರ ಉಳಿಯುವ ಮೂಲಕ ಆರೋಗ್ಯ ಸುರಕ್ಷತೆಗೆ ಗಮನ ಹರಿಸಿದ ಘಟನೆಗಳು ನಡೆಯಿತು.

ಬೆಳಗ್ಗೆಯಿಂದ ಮತದಾನ ನೀರಸವಾಗಿ ನಡೆದರೂ, ಸಂಜೆ ವೇಳೆ ನಗರ ಸೇರಿದಂತೆ ಗ್ರಾಮೀಣ ಭಾಗದ ಮುಡಬಿ, ಕೋಹಿನೂರ, ಅಲಗೂಡ, ಮಂಠಾಳ, ಹುಲಸೂರ ಸೇರಿದಂತೆ ಕೆಲವೆಡೆ ನೂಕು ನುಗ್ಗಲು ಕಂಡು ಸೃಷ್ಠಿಯಾಗಿ ಸಾಮಾಜಿಕ ಅಂತರ, ಮುಖಕ್ಕೆ ಮಾಸ್ಕ್ ಧರಿಸುವುದು ಸೇರಿದಂತೆ ಕೋವಿಡ್‌ನ ನಿಯಮಗಳನ್ನು ಗಾಳಿಗೆ ತೂರಿದ್ದು ಗೋಚರಿಸಿತು.

ಸಖಿ ಕೇಂದ್ರದಲ್ಲಿ ಸುಖಿ ಮತದಾನ:

ತಾಲೂಕಿನ ಬೇಟ್‌ಬಾಲಕುಂದಾ ಗ್ರಾಪಂನಲ್ಲಿ ವಿಶೇಷವಾಗಿ ಮಹಿಳೆಯರಿಗಾಗಿ ಸ್ಥಾಪಿಸಲಾಗಿದ್ದ 'ಸಖಿ' ಕೇಂದ್ರದಲ್ಲಿ ಎಲ್ಲಾ ರೀತಿಯ ನಿಯಮಗಳನ್ನು ಅನುಸರಿಸಿಯೇ ಮತದಾನ ನಡೆದಿದ್ದು ವಿಶೇಷವಾಗಿತ್ತು. ಮತಗಟ್ಟೆಗೆ ಪ್ರವೇಶ ಮಾಡುತಿದ್ದಂತೆ ಥರ್ಮಲ್ ಸ್ಕ್ರೀನಿಂಗ್​, ಸ್ಯಾನಿಟೈಸರ್ ಮಾಡಿದ ನಂತರ ಕಡ್ಡಾಯವಾಗಿ ಮಾಸ್ಕ ಧರಿಸಿ, ಸಾಮಾಜಿಕ ಅಂತರ ಕಾಪಾಡುವಲ್ಲಿ ಹೆಜ್ಜೆ ಹೆಜ್ಜೆಗೂ ನಿಮಯ ಪಾಲನೆ ಮಾಡಿದ ಮತಗಟ್ಟೆ ಸಿಬ್ಬಂದಿ ಸೈ ಎನಿಸಿಕೊಂಡಿದ್ದರು.

ಡಿಸಿ ಪರಿಶೀಲನೆ:

ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅವರು ತಾಲೂಕಿನ ಇಲ್ಲಾಳ, ಮುಚಳಂಬ ಸೇರಿದಂತೆ ವಿವಿಧ ಗ್ರಾಮಗಳ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಮತಗಟ್ಟೆ ಕೇಂದ್ರಗಳಲ್ಲಿ ಚುನಾವಣಾ ಕರ್ತವ್ಯದಲ್ಲಿ ಭಾಗಿಯಾದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ, ಬಿಎಲ್‌ಓ ಮತ್ತು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಇನ್ನಿತರ ಸಿಬ್ಬಂದಿಯ ಕಾರ್ಯಕ್ಕೆ ಡಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ABOUT THE AUTHOR

...view details