ಬಸವಕಲ್ಯಾಣ: ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಥಳೀಯರನ್ನು ಕೈ ಬಿಟ್ಟು ಹೊರಗಿನಿಂದ ಬಂದ ಅಭ್ಯರ್ಥಿಗೆ ಟಿಕೆಟ್ ನೀಡಲಾಗಿದೆ ಎಂದು ಆರೋಪಿಸಿ ಇಲ್ಲಿಯ ಬಸವಕಲ್ಯಾಣ ಸ್ವಾಭಿಮಾನಿ ಬಳಗ ಹಾಗೂ ಬಿಜೆಪಿ ಪಕ್ಷದ ಅಸಮಾಧಾನಿತ ಕಾರ್ಯಕರ್ತರು ಸಭೆ ನಡೆಸಿದರು. ಸ್ವಾಭಿಮಾನಿ ಬಳಗದಿಂದ ಬಂಡಾಯ ಅಭ್ಯರ್ಥಿಗೆ ಕಣಕ್ಕಿಳಿಸುವ ಮೂಲಕ ಬಿಜೆಪಿಗೆ ಬಿಸಿ ಮುಟ್ಟಿಸಲು ನಿರ್ಣಯ ಕೈಗೊಳ್ಳಲಾಯಿತು.
ನಗರದ ಬಸವೇಶ್ವರ ದೇವಸ್ಥಾನದ ದಾಸೋಹ ನಿವಾಸದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಪಾಲ್ಗೊಂಡ ಯುವಕರು ಹಾಗೂ ಪ್ರಮುಖರು, ಬಂಡಾಯ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸಿ, ಬೆಂಬಲಿಸಲು ತೀರ್ಮಾನಿಸಿದರು. ಸಭೆ ನಂತರ ಕೆಲ ಕಾಲ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರತಿಭಟನೆ ನಡೆಸಿದ ಯುವಕರು, ಬಿಜೆಪಿ ವರಿಷ್ಠರ ಹಾಗೂ ಸಂಸದ ಭಗವಂತ ಖೂಬಾ ವಿರುದ್ಧ ಘೋಷಣೆಯನ್ನು ಕೂಗುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು. ಇದೇ ವೇಳೆ ಸಂಸದ ಭಗವಂತ ಖೂಬಾ ಅವರ ಭಾವಚಿತ್ರವಿದ್ದ ಬ್ಯಾನರ್‌ಗೆ ಬೆಂಕಿ ಹಚ್ಚಿ ಅಸಮಧಾನ ಹೊರಹಾಕಿದರು.
ಸಂಸದ ಭಗವಂತ ಖೂಬಾ ಬಿಜೆಪಿ ಟಿಕೆಟ್ ಮಾರಿಕೊಂಡಿದ್ದಾರೆ ಎಂದು ಆರೋಪಿಸಿ ಸಂಸದರು ಹಾಗೂ ಪಕ್ಷದ ಅಭ್ಯರ್ಥಿ ಶರಣು ಸಲಗರ ವಿರುದ್ಧ ಯುವಕರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯರಿಗೆ ಟಿಕೆಟ್ ನೀಡದೆ ಕ್ಷೇತ್ರದ ಹೊರಗಿನವರಿಗೆ ಟಿಕೆಟ್ ನೀಡಿದ್ದಾರೆ. ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಜೊತೆಗೆ ಇನ್ನಷ್ಟು ಮತದಾರರಿಗೆ ಬಿಜೆಪಿ ಪಕ್ಷಕ್ಕೆ ಮತ ಹಾಕದಿರಲು ಪ್ರಚಾರ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಒಮ್ಮತದ ನಿರ್ಧಾರ ಪ್ರಕಟಿಸಲಾಯಿತು.