ಬೀದರ್: ಕರ್ನಾಟಕ ವಿಧಾನಸಭೆ ಹಿನ್ನೆಲೆ ಎಲ್ಲ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್, ಜೆಡಿಎಸ್ ಈಗಾಗಲೇ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಿದ್ದು, ಮಂಗಳವಾರ ಬಿಜೆಪಿ ಹೈಕಮಾಂಡ್ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಒಟ್ಟು 189 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಔರಾದ್‍ನಿಂದ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್, ಬಸವಕಲ್ಯಾಣದಲ್ಲಿ ಹಾಲಿ ಶಾಸಕ ಶರಣು ಸಲಗರ, ಬೀದರ್ ದಕ್ಷಿಣದಿಂದ ಕೆಎಸ್‍ಐಐಡಿಸಿ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ ಹಾಗೂ ಹುಮನಾಬಾದ್‍ನಿಂದ ಡಾ.ಸಿದ್ದು ಪಾಟೀಲ್ ಅವರಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ. ಅಧಿಕ ಆಕಾಂಕ್ಷಿಗಳಿರುವ ಬೀದರ್ ಮತ್ತು ಭಾಲ್ಕಿ ಕೇತ್ರದ ಅಭ್ಯರ್ಥಿಗಳನ್ನು ಇನ್ನೂ ಘೋಷಣೆ ಮಾಡಿಲ್ಲ.
ಜಿಲ್ಲೆಯ ಹಾಲಿ ಶಾಸಕರಿಬ್ಬರಿಗೂ ಟಿಕೆಟ್ ನೀಡಲಾಗಿದ್ದು, ನಿರೀಕ್ಷೆಯಂತೆ ಡಾ.ಶೈಲೇಂದ್ರ ಬೆಲ್ದಾಳೆ ಅವರ ಹೆಸರು ಘೋಷಣೆ ಮಾಡಲಾಗಿದೆ. ಜಿದ್ದಾಜಿದ್ದಿನ ಕ್ಷೇತ್ರವಾದ ಹುಮನಾಬಾದ್‍ನಲ್ಲಿ ಹೊಸ ಮುಖ ಡಾ.ಸಿದ್ದು ಪಾಟೀಲ್‍ಗೆ ಅವಕಾಶ ಕಲ್ಪಿಸಲಾಗಿದೆ. ಇನ್ನೊಬ್ಬ ಪ್ರಬಲ ಆಕಾಂಕ್ಷಿಯಾಗಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವಾನಂದ ಮಂಠಾಳಕರ್, ಮಾಜಿ ಶಾಸಕ ಸುಭಾಷ ಕಲ್ಲೂರ್ ಅವರಿಗೆ ಹೈಕಮಾಂಡ್ ಶಾಕ್ ನೀಡಿದೆ.
ಇನ್ನು, ಬೀದರ್ ಕ್ಷೇತ್ರದಿಂದ ಯಾರಿಗೆ ಟಿಕೆಟ್ ಸಿಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಎಂಎಲ್ಸಿ ರಘುನಾಥರಾವ ಮಲ್ಕಾಪುರೆ, ಹಿಂದಿನ ಪರಾಜಿತ ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ, ಹಿರಿಯ ಮುಖಂಡರೂ ಆದ ಉದ್ಯಮಿ ಗುರುನಾಥ ಕೊಳ್ಳುರ್, ಮುಖಂಡ ಈಶ್ವರಸಿಂಗ್ ಠಾಕೂರ್ ಈ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಬಾಬು ವಾಲಿ, ಸೋಮಶೇಖರ ಪಾಟೀಲ್ ಗಾದಗಿ ಅವರು ಕೂಡ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ.